ಸಾರಾಂಶ
ದೇಶಭಕ್ತರ ತ್ಯಾಗ ಬಲಿದಾನದ ಫಲವಾಗಿ ಭಾರತ ದೇಶ ಬ್ರಿಟೀಷರ ದಾಸ್ಯದಿಂದ ಸ್ವಂತಂತ್ರ ಪಡೆದುಕೊಂಡಿದೆ. ಆದರೆ, ಭಾರತೀಯರಿಗೆ ನಿಜವಾಗಿ ಸ್ವತಂತ್ರ್ಯ ಬಂದಿಲ್ಲ. ದೇಶದಲ್ಲಿ ಇನ್ನೂ ಆರ್ಥಿಕ ಅಸಮಾನತೆ ಇದೆ, ಮಹಿಳಾ ಪೀಡನೆ ಹೆಚ್ಚಾಗಿದೆ,
ಕನ್ನಡಪ್ರಭ ವಾರ್ತೆ ಚವಡಾಪುರ
ದೇಶಭಕ್ತರ ತ್ಯಾಗ ಬಲಿದಾನದ ಫಲವಾಗಿ ಭಾರತ ದೇಶ ಬ್ರಿಟೀಷರ ದಾಸ್ಯದಿಂದ ಸ್ವಂತಂತ್ರ ಪಡೆದುಕೊಂಡಿದೆ. ಆದರೆ, ಭಾರತೀಯರಿಗೆ ನಿಜವಾಗಿ ಸ್ವತಂತ್ರ್ಯ ಬಂದಿಲ್ಲ. ದೇಶದಲ್ಲಿ ಇನ್ನೂ ಆರ್ಥಿಕ ಅಸಮಾನತೆ ಇದೆ, ಮಹಿಳಾ ಪೀಡನೆ ಹೆಚ್ಚಾಗಿದೆ, ಅನಕ್ಷರತೆ ಪ್ರಮಾಣ ತಗ್ಗುತ್ತಿಲ್ಲ. ಇವೆಲ್ಲಾ ಸ್ವತಂತ್ರ್ಯ ಸಂಭ್ರಮಕ್ಕಂಟಿದ ಪೀಡುಗಗಳಾಗಿವೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.ಅಫಜಲ್ಪುರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ 79ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ತಾಲೂಕು ಆಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ನಮ್ಮದು ಅಭಿವೃದ್ಧಿಶೀಲ ದೇಶ, ಜನರ ನಿರೀಕ್ಷೆಗಳು ಹೆಚ್ಚಿರುತ್ತವೆ, ಅವುಗಳಿಗೆ ತಕ್ಕ ಕೆಲಸಗಳಾಗದಿದ್ದಾಗ ಜನ ಸರ್ಕಾರಗಳನ್ನು ತಿರಸ್ಕಾರ ಮಾಡುತ್ತಾರೆ. ಈ ಶಕ್ತಿ ಜನರಿಗೆ ಕಲ್ಪಿಸಿದ್ದು ಸಂವಿಧಾನ ಎಂದ ಅವರು ಪ್ರತಿ ಭಾರತೀಯರು ಸಂವಿಧಾನವನ್ನು ಗೌರವಿಸಬೇಕು, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಬೇಕು ಎಂದು ಕರೆ ನೀಡಿದರು.ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾತನಾಡಿ, ಪ್ರತಿ ಬಾರಿಯಂತೆ ಈ ಬಾರಿಯೂ ಸ್ವತಂತ್ರ ದಿನವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ತಾಲೂಕು ಆಡಳಿತದಿಂದ ನಿರ್ಧರಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಮಳೆಯ ಕಾರಣದಿಂದ ತಾಲೂಕು ಕ್ರೀಡಾಂಗಣದಲ್ಲಿನ ಕಾರ್ಯಕ್ರಮ ರದ್ದುಗೊಳಿಸಬೇಕಾಯಿತು. ನಂತರ ಡಾ. ಶರಣಬಸಪ್ಪ ಅಪ್ಪ ಅವರು ಲಿಂಗೈಕ್ಯರಾಗಿರುವುದರಿಂದ ಅದ್ಧೂರಿ ಕಾರ್ಯಕ್ರಮ ಮಾಡಲಾಗುತ್ತಿಲ್ಲ. ಬರುವ ಸೆ.17ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದಂದು ಎಲ್ಲಾ ರೀತಿಯ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ, ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು, ರಾಜಕೀಯ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.