ಪಶು ಸಂಗೋಪನೆಯಿಂದ ದೇಶದ ಆರ್ಥಿಕ ಬಲವರ್ಧನೆ-ಡಾ. ನಾಗರಾಜ್‌

| Published : Jul 23 2024, 12:30 AM IST

ಸಾರಾಂಶ

ದೇಶದ ಆರ್ಥಿಕ ಬಲವರ್ಧನೆಗೆ ಪಶು ಸಂಗೋಪನೆ ಕೃಷಿ ಜೊತೆಗೆ ಶೇ.೧೫ರಷ್ಟು ಜಿಡಿಪಿ ನೀಡುತ್ತಿದೆ. ರೈತರಿಗೆ ಪಶುಸಂಗೋಪನೆ ಬೆನ್ನೆಲುಬಾಗಿದ್ದು, ಪಶು ವೈದ್ಯರು ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರಿಗೆ ಹಾಗೂ ದೇಶಕ್ಕೆ ಬಹಳ ಸಹಾಯವಾಗುತ್ತದೆ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ನಾಗರಾಜ್ ಎಲ್. ಹೇಳಿದರು.

ಹಾವೇರಿ: ದೇಶದ ಆರ್ಥಿಕ ಬಲವರ್ಧನೆಗೆ ಪಶು ಸಂಗೋಪನೆ ಕೃಷಿ ಜೊತೆಗೆ ಶೇ.೧೫ರಷ್ಟು ಜಿಡಿಪಿ ನೀಡುತ್ತಿದೆ. ರೈತರಿಗೆ ಪಶುಸಂಗೋಪನೆ ಬೆನ್ನೆಲುಬಾಗಿದ್ದು, ಪಶು ವೈದ್ಯರು ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರಿಗೆ ಹಾಗೂ ದೇಶಕ್ಕೆ ಬಹಳ ಸಹಾಯವಾಗುತ್ತದೆ ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ನಾಗರಾಜ್ ಎಲ್. ಹೇಳಿದರು.ನಗರದ ಹೊಯ್ಸಳ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ವಿಶ್ವ ಪಶು ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಪಶುವೈದ್ಯರ ಸೇವೆ ಅನನ್ಯ. ನಾನೂ ಸಹ ಎರಡು ವರ್ಷ ಪಶು ವೈದ್ಯನಾಗಿ ಎರಡು ವರ್ಷ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದು, ನನಗೆ ಬಹಳ ತೃಪ್ತಿ ತಂದುಕೊಟ್ಟಿದೆ ಎಂದರು.ವೆಂಕಿಸ್ ಚಿಕನ್ ಕಂಪನಿಯ ಡಿಜಿಎಂ ರವಿಕುಮಾರ್ ಮಾತನಾಡಿ, ಕೋಳಿ ಸಾಕಾಣಿಕೆ ಬಹಳ ಮಹತ್ವ ಪಡೆದಿದ್ದು, ಕೋಳಿಯಿಂದ ಅನೇಕ ಉಪ ಉತ್ಪನ್ನಗಳನ್ನು ಮಾಡಬಹುದಾಗಿದೆ ಮತ್ತು ರೈತರಿಗೆ ಕೋಳಿ ಸಾಕಾಣಿಕೆ ಉತ್ತಮ ಲಾಭ ತಂದುಕೊಡುತ್ತದೆ. ಆದ್ದರಿಂದ ಕೋಳಿ ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಸತೀಶ ಸಂತಿ ಮಾತನಾಡಿ, ಪಶು ವೈದ್ಯರು ಕರ್ತವ್ಯ ಮತ್ತು ಸಮಯ ಪಾಲನೆ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದ ಅವರು, ಎಲ್ಲರಿಗೂ ವಿಶ್ವಪಶು ವೈದ್ಯರ ದಿನಾಚರಣೆ ಅಂಗವಾಗಿ ಶುಭ ಕೋರಿದರು. ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಪರಮೇಶ್ ಎನ್. ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಚಟುವಟಿಕೆ ಬಗ್ಗೆ ವಿವರಿಸಿದರು. ಜಿಲ್ಲೆಯಲ್ಲಿ ಪಶು ವೈದ್ಯರು, ಸಿಬ್ಬಂದಿಯ ಕೊರತೆಯ ನಡುವೆಯೂ ಇರುವ ವೈದ್ಯರು, ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ಅರವಿಂದ್ ಮಾತನಾಡಿ, ಒತ್ತಡ ನಿರ್ವಹಣೆ ಹಾಗೂ ಮಾಹಿತಿ ಹಕ್ಕು ಅಧಿನಿಯಮ ಕುರಿತು ಉಪನ್ಯಾಸ ನೀಡಿದರು. ಜಿಲ್ಲೆಯ ಅತ್ಯುತ್ತಮ ಪಶು ವೈದ್ಯರನ್ನಾಗಿ ಡಾ. ನೀಲಕಂಠ ಬಿ. ಅಂಗಡಿ ಅವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನಿಂದ ಅತ್ಯುತ್ತಮ ಪಶುವೈದ್ಯರೆಂದು ಆಯ್ಕೆಯಾದ ಡಾ. ರಾಘವೇಂದ್ರ ಕಿತ್ತೂರ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಅತಿಥಿಗಳಾಗಿ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಜಯಕುಮಾರ್ ಕಂಕನವಾಡಿ ಭಾಗವಹಿಸಿದ್ದರು. ಸಂಘದ ಆಡಳಿತ ಸದಸ್ಯರಾದ ಡಾ. ನರೇಂದ್ರ ಚೌಡಾಳ, ಡಾ. ಪವನ್ ಬೆಳಕೇರಿ, ಡಾ. ಯುವರಾಜ್ ಚೌಹಾಣ್, ಅಮಿತ್ ಪುಟಾಣಿಕರ್, ಪ್ರವೀಣ್ ಮರಿಗೌಡರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಇಲಾಖೆಯ ಹಾಗೂ ಕೆಎಂಎಫ್ ಮತ್ತು ಇತರ ಪಶು ವೈದ್ಯರು ಸೇರಿ ೭೦ಪಶು ವೈದ್ಯರು ಹಾಗೂ ಅನೇಕ ಔಷಧಿ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.