ಸಾರಾಂಶ
ಧಾರವಾಡ:
ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಡಬಲ್ ಪೇಮೆಂಟ್ ಆಗಿರುವ ಕುರಿತು ಕೆಐಎಡಿಬಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ಶುಕ್ರವಾರ ಇಲ್ಲಿಯ ಲಕಮನಹಳ್ಳಿಯಲ್ಲಿರುವ ಕೆಐಎಡಿಬಿ ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿತು.ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಬಂದಿದ್ದ ಅಧಿಕಾರಿಗಳ ತಂಡ ಕಚೇರಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಲ್ಲದೇ, ಅಧಿಕಾರಿಗಳನ್ನು ವಿಚಾರಣೆ ಸಹ ನಡೆಸಿತು. ನಕಲಿ ದಾಖಲೆ ಸೃಷ್ಟಿಸಿ ಒಂದು ಬಾರಿ ಭೂ ಸ್ವಾಧೀನಗೊಂಡ ಜಮೀನಿಗೆ ಮತ್ತೊಮ್ಮೆ ಪರಿಹಾರದ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಸಿಐಡಿ ಪ್ರಕರಣ ತನಿಖೆ ನಡೆಸಿತ್ತು. ಈ ವೇಳೆ ಇಲಾಖೆಯ ಈ ಹಿಂದಿನ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದ ವಿ.ಡಿ. ಸಜ್ಜನ್ ತಮ್ಮ ನಿವೃತ್ತಿಯ ಕೊನೆಯ ದಿನವೇ ₹ 30 ಕೋಟಿ ಬೇರೆ ಬೇರೆ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಈ ಕುರಿತು ಕನ್ನಡಪ್ರಭ ಸಮಗ್ರ ವರದಿ ಪ್ರಕಟಿಸುವ ಮೂಲಕ ಹಗರಣವನ್ನು ಬೆಳಕಿಗೆ ತಂದಿತ್ತು.
ಮೊದಲನೇ ಆರೋಪಿ ಸಜ್ಜನ ಜೈಲು ಸೇರಿದ್ದರು. ಡಬಲ್ ಪೇಮೆಂಟ್ ಕುರಿತು ಸಿಐಡಿ ತನಿಖೆಯ ಚಾರ್ಜ್ ಶೀಟ್‌ನಲ್ಲಿ ಒಂದೇ ದಿನದಲ್ಲಿ ₹ 30 ಕೋಟಿ ವರ್ಗಾವಣೆ ಬಗ್ಗೆ ಆರೋಪಿಸಲಾಗಿತ್ತು. ಇದೇ ವೇಳೆ ಸಿಐಡಿ ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ ಎಂಬ ಆರೋಪ ಹೋರಾಟಗಾರರಿಂದ ಕೇಳಿ ಬಂದಿತ್ತು. ತನಿಖೆಯ ಮುಂದುವರಿದ ಭಾಗವಾಗಿ ಜಾರಿ ನಿರ್ದೇಶನಾಲಯವು ತನ್ನ ಕಾರ್ಯ ಆರಂಭಿಸಿದೆ.ಕೆಐಎಡಿಬಿಯಲ್ಲಿ ಆಗಿರುವ ಹಗರಣಗಳ ಕುರಿತು ದೂರು ಸಲ್ಲಿಸಿದ ಹೋರಾಟಗಾರ ಬಸವರಾಜ ಕೊರವರ, ಮೊದಲ ಹಂತದಲ್ಲಿ ₹ 20 ಕೋಟಿ ಹಾಗೂ ಎರಡನೇ ಹಂತದಲ್ಲಿ ₹ 40 ಸೇರಿದಂತೆ ಒಟ್ಟು ₹ 60 ಕೋಟಿ ಹಗರಣ ಇದಾಗಿದ್ದು, ಈ ಕುರಿತು ಸಹ ಅಗತ್ಯ ದಾಖಲೆಗಳನ್ನು ಭೂಸ್ವಾಧೀನ ಇಲಾಖೆ ಹಿರಿಯ ಅಧಿಕಾರಿಗಳು, ಬೃಹತ್ ಕೈಗಾರಿಕಾ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗೆ ನೀಡಲಾಗಿತ್ತು. ಈ ವಿಷಯದಲ್ಲಿ ಸಿಐಡಿ ಸರಿಯಾಗಿ ತನಿಖೆ ಮಾಡದೇ ₹ 60 ಕೋಟಿ ಹಗರಣದಲ್ಲಿ ಬರೀ ₹19.5 ಕೋಟಿ ಹಗರಣವನ್ನು ಮಾತ್ರ ಪತ್ತೆ ಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಈಗ ಜಾರಿ ನಿರ್ದೇಶನಾಲಯ ತನ್ನ ಕಾರ್ಯ ಆರಂಭಿಸಿದ್ದು ಸಮಾಧಾನ ಸಂಗತಿಯಾದರೂ ಸರ್ಕಾರ ಹಗರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.