ಸಾರಾಂಶ
ಗದಗ: ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಜಾರಿ ನಿರ್ದೇಶನಾಲಯ (ಇಡಿ) ಎನ್ನುವುದು ಸೀಳು ನಾಯಿ ಇದ್ದಂತೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಲೇವಡಿ ಮಾಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮುಡಾ ಕೇಸ್ ಸಂಬಂಧ ಚುರುಕುಗೊಂಡ ತನಿಖೆ ವಿಚಾರವಾಗಿ ಮಾತನಾಡಿದ ಅವರು, ಇಡಿ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ಅಲ್ಲ, ಅದು ರಾಜಕೀಯ ವಿಚ್ ಹಂಟಿಂಗ್ ಏಜೆನ್ಸಿಯಾಗಿದೆ.ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡುವುದು, ವಿಪಕ್ಷ ನಾಯಕರನ್ನು ಬಲಿ ಹಾಕೋದೇ ಇಡಿ ಉದ್ಯೋಗವಾಗಿದೆ. ದೇಶಗಳಲ್ಲಿ ಇಲ್ಲಿಯವರೆಗೆ ಯಾರ್ಯಾರ ಮೇಲೆ ಕೇಸ್ ಹಾಕಿದ್ದಾರೆ ಎನ್ನುವ ದಾಖಲೆ ಗಮನಿಸಿ ಬರೀ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಶ್ರೀಮಂತರ ಮೇಲೆ ಬ್ಲ್ಯಾಕ್ ಮನಿ ಕೇಸ್ ಹಾಕಿದ್ದಾರಾ..? ಎಂದು ಪ್ರಶ್ನಿಸಿದ ಅವರು, ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟವರ ಮೇಲೆ ಕೇಸ್ ಹಾಕಿದ್ದಾರಾ..? ಇಡಿ ಎಂದರೆ ಅದು ಬಿಜೆಪಿ ಅಂಗ ಸಂಸ್ಥೆಯಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜಕೀಯ ವಿರೋಧಿಗಳ ಬಲಿ ಹಾಕೋದು ಈ ಅಂಗ ಸಂಸ್ಥೆಯ ಕೆಲಸವಾಗಿದೆ ಎಂದರು.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ದೆಹಲಿ, ಪಂಜಾಬ್, ಛತ್ತೀಸಗಡ ಎಲ್ಲ ಕಡೆ ವಿಪಕ್ಷಗಳ ಮೇಲೆ ಕೇಸ್ ಹಾಕಿದ್ದಾರೆ. ಇಲ್ಲಿಯವರೆಗೆ ಇಡಿ ಎಷ್ಟು ಕೇಸ್ ಹಾಕಿದೆಯೋ ಶೇ. 90ರಷ್ಟು ವಿರೋಧ ಪಕ್ಷಗಳ ಮೇಲೆ ಹಾಕಿದ್ದಾರೆ.ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನ ಗೆದ್ದ ಮೇಲೆ ಬಿಜೆಪಿಗೆ ಸಹಿಸೋಕೆ ಆಗುತ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲೂ ಆಗಲಿಲ್ಲ. ಉಪ ಚುನಾವಣೆಯಲ್ಲೂ ಆಗಲಿಲ್ಲ ಇದರಿಂದ ಹತಾಶರಾಗಿರುವ ಬಿಜೆಪಿಯವರು, ಇಡಿ ಅನ್ನೋ ಸೀಳು ನಾಯಿಯನ್ನು ಬಿಟ್ಟಿದ್ದಾರೆ. ದೇಶದಲ್ಲಿ ಇಡಿ ಒಬ್ಬ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿದೆಯಾ, ಬರೀ ರಾಜಕೀಯ ವಿರೋಧಿಗಳ ಮೇಲೆ ಕೇಸ್ ಹಾಕುತ್ತಿದ್ದಾರೆ. ಇದು ಪೊಲಿಟಿಕಲ್ ಅಟ್ಯಾಕ್ ಅಷ್ಟೇ..
ಅವರನ್ನು ನಾವು ಕೂಡಾ ಲೀಗಲ್ ಆಗಿ ಎದುರಿಸುತ್ತೇವೆ. ಜನತಾ ನ್ಯಾಯಾಲಯದಲ್ಲೂ ಎದುರಿಸುತ್ತೇವೆ ಎಂದರು.