ಸಾರಾಂಶ
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಬುಧವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ.
ತುಮಕೂರು : ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಬುಧವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ.
ತುಮಕೂರಿನ ಮರಳೂರು ದಿಣ್ಣೆಯಲ್ಲಿರುವ ಎಸ್ಎಸ್ಐಟಿ ಇಂಜಿನಿಯರಿಂಗ್ ಕಾಲೇಜು, ತುಮಕೂರಿನ ಹೆಗ್ಗೆರೆ ಹಾಗೂ ಟಿ. ಬೇಗೂರು ಬಳಿ ಇರುವ ಮೆಡಿಕಲ್ ಕಾಲೇಜಿನ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
2019ರಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಆ ವೇಳೆ ಡಾ. ಜಿ. ಪರಮೇಶ್ವರ್ ರವರ ಆಪ್ತ ಸಹಾಯಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ಬಳಿಕ ದಾಳಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ನೀಟ್ ಮತ್ತು ಸಿಇಟಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಇನ್ನೋವಾ ಕಾರುಗಳಲ್ಲಿ ಬಂದ 40ಕ್ಕೂ ಹೆಚ್ಚು ಅಧಿಕಾರಿಗಳು ಎರಡು ಪ್ರತ್ಯೇಕ ತಂಡಗಳಾಗಿ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮೇಲೆ ದಾಳಿ ನಡೆಸಿವೆ. ಬುಧವಾರ ಬೆಳಗ್ಗೆ ನೇರವಾಗಿ ಕಾಲೇಜಿನ ಅಡ್ಮಿನ್ ಬ್ಲಾಕ್ ಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಮತ್ತೊಂದು ತಂಡ ಹೆಗ್ಗೆರೆ ಸಮೀಪ ಅಗಳಕೋಟೆ ಬಳಿ ಇರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ನಡೆಸಿತು. ಇತ್ತೀಚೆಗಷ್ಟೇ ಮಾಜಿ ಶಾಸಕ ಶಫಿ ಅಹಮದ್ ಅವರಿಂದ ತುಮಕೂರು ಟೋಲ್ ಬಳಿ ಖರೀದಿಸಿದ್ದ ಕಾಲೇಜಿಗೂ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸುವ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಐಟಿ ದಾಳಿಯ ಮುಂದುವರಿದ ಭಾಗವಾಗಿ ಇಡಿ ದಾಳಿ ನಡೆದಿದೆ ಎನ್ನಲಾಗಿದೆ.
ತಮ್ಮ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಿಂದ ತುಮಕೂರಿಗೆ ಬಂದಿದ್ದಾರೆ. ತಮ್ಮ ಪತ್ನಿ ಕನ್ನಿಕಾ ಪರಮೇಶ್ವರ್ ಜತೆ ತುಮಕೂರು, ಟಿ. ಬೇಗೂರು ಹಾಗೂ ಹೆಗ್ಗೆರೆಯ ಮೆಡಿಕಲ್ ಕಾಲೇಜಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಭೇಟಿ ನೀಡಿ ಇ.ಡಿ. ಅಧಿಕಾರಿಗಳಿಗೆ ಶಿಕ್ಷಣ ಸಂಸ್ಥೆಯ ಅಗತ್ಯ ದಾಖಲಾತಿಗಳ ಮಾಹಿತಿಯನ್ನು ಒದಗಿಸಿದ್ದಾರೆ ಎನ್ನಲಾಗಿದೆ.