ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್/ಚಿಕ್ಕಬಳ್ಳಾಪುರ
ಮಾಲೂರು ಕ್ಷೇತ್ರದ ಶಾಸಕ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರ ನಿವಾಸ, ಅವರ ಕಚೇರಿಗಳು ಹಾಗೂ ಆಪ್ತರ ನಿವಾಸಗಳ ಮೇಲೆ ಸೋಮವಾರ ಕೇಂದ್ರದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಚಿಮುಲ್ ಇತ್ತೀಚೆಗಷ್ಟೇ ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಆರೋಪದಿಂದಾಗಿ ಸುದ್ದಿಯಲ್ಲಿತ್ತು. ಇದರ ಬೆನ್ನಲ್ಲೇ ಈ ದಾಳಿ ನಡೆದಿರುವುದು ತೀವ್ರ ಕುತೂಹಲ ಮೂಡಿಸಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಅವಳಿ ಜಿಲ್ಲೆಗಳ ಸುಮಾರು 8ಕ್ಕೂ ಹೆಚ್ಚು ಕಡೆ, 50ಕ್ಕೂ ಹೆಚ್ಚು ಅಧಿಕಾರಿಗಳು ಈ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಮುಂಜಾನೆಯೇ ದಾಳಿ: ನಂಜೇಗೌಡರ ಸ್ವಗ್ರಾಮ ಟೇಕಲ್‌ನ ಕೊಮ್ಮನಹಳ್ಳಿಯ ನಿವಾಸಕ್ಕೆ ಮುಂಜಾನೆ 5.30ರ ಸಮಯದಲ್ಲಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದು, ನಿದ್ದೆಯಲ್ಲಿದ್ದವರನ್ನು ಎಬ್ಬಿಸಿ ಮನೆಯಲ್ಲಿದ್ದ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಸಕರ ಜತೆಗೆ ಅವರ ಪತ್ನಿ ರತ್ನಮ್ಮ, ಕುಟುಂಬದ ಇತರೆ ಸದಸ್ಯರನ್ನೂ ವಿಚಾರಣೆ ನಡೆಸಲಾಗಿದೆ. ಮನೆಯ ಪ್ರತಿ ಕೊಠಡಿಗಳನ್ನು ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಜಾಲಾಡಿದ್ದಾರೆ ಎನ್ನಲಾಗಿದೆ.
ಜಲ್ಲಿ ಕ್ರಷರ್ ಪ್ರದೇಶ ಪರಿಶೀಲನೆ: ನಂತರ ಶಾಸಕರ ಪುತ್ರ ಕೆ.ಎನ್.ಹರೀಶ್ ಒಡೆತನದ ಶ್ರೀ ನಂಜುಂಡೇಶ್ವರ ಸ್ಟೋನ್ ಕ್ರಷರ್ ಬಳಿ ಸುಮಾರು ಆರು ಮಂದಿ ಅಧಿಕಾರಿಗಳು ತೆರಳಿ ವಿವಿಧ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಹರೀಶ್‌ರನ್ನೂ ಅಧಿಕಾರಿಗಳು ಸ್ಥಳಕ್ಕೆ ಕರೆದೊಯ್ದು ಮಾಹಿತಿ ಪಡೆದಿದ್ದಾರೆ.
ಆಪ್ತ ಕಾರ್ಯದರ್ಶಿ ಮನೆ ಮೇಲೂ ದಾಳಿ: ಟೇಕಲ್ ಸಮೀಪದ ದೊಡ್ಡಮಲ್ಲೆ ಗ್ರಾಮದಲ್ಲಿರುವ ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಹರೀಶ್ ಅವರನ್ನು ಶಾಸಕರ ಮನೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರ ಮತ್ತೊಬ್ಬ ಆಪ್ತ ಕಾರ್ಯದರ್ಶಿ ಗುರುವಗೊಲ್ಲಹಳ್ಳಿ ಮಂಜುನಾಥನನ್ನೂ ಇಡಿ ಅಧಿಕಾರಿಗಳು ಕೆಲ ವಿಚಾರಗಳಿಗೆ ಸಂಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಲೂರು ತಾಪಂ ಕಚೇರಿಯಲ್ಲಿರುವ ಶಾಸಕರ ಕಾರ್ಯಾಲಯ, ಅಲ್ಲಿನ ಶಿಬಿರ ಕಚೇರಿ, ನಂತರ ಶಾಸಕರ ಆಪ್ತ ಅಬ್ಬೇನಹಳ್ಳಿ ಗೋಪಾಲ್ ಅವರ ಮನೆಯಲ್ಲೂ ಇ.ಡಿ. ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಈ ಮಧ್ಯೆ, ಕೋಚಿಮುಲ್ ನಿರ್ದೇಶಕ ಅಶ್ವತ್ಥ್ ನಾರಾಯಣ ಬಾಬು(ಊಲವಾಡಿ ಬಾಬು) ಅವರ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ನಿವಾಸದ ಮೇಲೂ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಕೆಲಕಾಲ ಪರಿಶೀಲನೆ ನಡೆಸಿದ್ದಾರೆ. ಕೋಚಿಮುಲ್ ನಿರ್ದೇಶಕರಾಗಿ ಅಶ್ವತ್ ನಾರಾಯಣ ಬಾಬು ಎರಡು ಬಾರಿ ಪಕ್ಷೇತರವಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಬಣದಿಂದ ಆಯ್ಕೆಯಾಗಿದ್ದಾರೆ.
ಶಾಸಕರ ಮನೆ ಮುಂದೆ ಜನಜಂಗುಳಿ: ಶಾಸಕರ ಮನೆಗೆ ಇ.ಡಿ. ದಾಳಿ ನಡೆಸಿದ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅವರ ಮನೆ ಮುಂದೆ ಮುಂಜಾನೆಯಿಂದಲೇ ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಇದರಿಂದಾಗಿ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ರಾಜಕೀಯ ದುರುದ್ದೇಶದಿಂದ ಬಿಜೆಪಿ ತನ್ನ ಸ್ವಾರ್ಥಕ್ಕೆ ಮಾಡಿಸಿರುವ ದಾಳಿಗಳಲ್ಲಿ ಇದೂ ಒಂದು. ಕಾಂಗ್ರೆಸ್ ಮೇಲಿನ ರಾಜಕೀಯ ಸೇಡಿಗಾಗಿ ಈ ದಾಳಿ ನಡೆಸಲಾಗಿದೆ. ಕೇಂದ್ರದಲ್ಲಿರುವ ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಐಟಿ ಮತ್ತು ಇಡಿ ದಾಳಿ ನಡೆಸುವ ಮೂಲಕ ವಿರೋಧ ಪಕ್ಷಗಳನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಎಲ್ಲೆಲ್ಲಿ ದಾಳಿ?
1. ಕೋಲಾರದ ಟೇಕಲ್‌ನ ಕೊಮ್ಮನಹಳ್ಳಿಯಲ್ಲಿರುವ ಶಾಸಕರ ಮನೆ
2. ಶಾಸಕರ ಪುತ್ರನ ಶ್ರೀ ನಂಜುಂಡೇಶ್ವರ ಸ್ಟೋನ್ ಕ್ರಷರ್ ಕಚೇರಿ
3. ಮಾಲೂರು ತಾಪಂ ಕಚೇರಿಯಲ್ಲಿರುವ ಶಾಸಕರ ಕಾರ್ಯಾಲಯಗಳು
4. ಆಪ್ತ ಅಬ್ಬೇನಹಳ್ಳಿ ಗೋಪಾಲ್, ಕೋಚಿಮುಲ್ ನಿರ್ದೇಶಕ ಅಶ್ವತ್ಥ್ ಮನೆ