ಸಾರಾಂಶ
ಭೂಕುಸಿತಗೊಂಡು ರೈಲು ಸಂಚಾರ ಸ್ಥಗಿತಕ್ಕೆ ಕಾರಣವಾಗಿರುವ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭಾರಿ ಮಳೆಯ ನಡುವೆಯೂ ಕಾಮಗಾರಿ ಮುಂದುವರಿದಿದೆ. ಇದೇ ವೇಳೆ ನೈಋತ್ಯ ರೈಲ್ವೆ ಜನರಲ್ ಮೆನೇಜರ್ ಅರವಿಂದ ಶ್ರೀವಾಸ್ತವ್ ಸೋಮವಾರ ಸ್ಥಳಕ್ಕೆ ಧಾವಿಸಿದ್ದು, ಕಾಮಗಾರಿಯ ತಪಾಸಣೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಭೂಕುಸಿತಗೊಂಡು ರೈಲು ಸಂಚಾರ ಸ್ಥಗಿತಕ್ಕೆ ಕಾರಣವಾಗಿರುವ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭಾರಿ ಮಳೆಯ ನಡುವೆಯೂ ಕಾಮಗಾರಿ ಮುಂದುವರಿದಿದೆ. ಇದೇ ವೇಳೆ ನೈಋತ್ಯ ರೈಲ್ವೆ ಜನರಲ್ ಮೆನೇಜರ್ ಅರವಿಂದ ಶ್ರೀವಾಸ್ತವ್ ಸೋಮವಾರ ಸ್ಥಳಕ್ಕೆ ಧಾವಿಸಿದ್ದು, ಕಾಮಗಾರಿಯ ತಪಾಸಣೆ ನಡೆಸಿದ್ದಾರೆ.ಹುಬ್ಬಳ್ಳಿಯಿಂದ ತಪಾಸಣೆ ವಿಶೇಷ ರೈಲಿನಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಜಿಎಂ ಅರವಿಂದ್ ಶ್ರೀವಾಸ್ತವ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ದಿನಪೂರ್ತಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯ ಪ್ರಗತಿ ವೀಕ್ಷಿಸಿತು.
ಪ್ರಸ್ತುತ ಸ್ಥಳದಲ್ಲಿ ಮೂರು ಏಜೆನ್ಸಿಗಳ ಪ್ರತಿನಿಧಿಗಳು ಇದ್ದು, ತಾಂತ್ರಿಕ ಪರಿಹಾರಗಳನ್ನು ಸೂಚಿಸುತ್ತಿದ್ದಾರೆ. ತಪಾಸಣಾ ತಂಡ ಭೂಕುಸಿತದ ಸ್ಥಳದಲ್ಲಿ ಟ್ರ್ಯಾಕ್‌ನ್ನು ಮರುಸ್ಥಾಪಿಸಲು ಶ್ರಮಿಸುತ್ತಿದೆ.ಹಳಿಯ ಮರುಸ್ಥಾಪನೆ ಕಾರ್ಯವನ್ನು ಸುರಕ್ಷಿತವಾಗಿ ಹಾಗೂ ಸಮಯೋಚಿತ ಪೂರ್ಣಗೊಳಿಸುವುದು ನಮ್ಮ ಪ್ರಮುಖ ಆದ್ಯತೆ. ಇದಕ್ಕಾಗಿ ತಂಡ ಅಹರ್ನಿಶಿ ಕಾರ್ಯನಿರ್ವಹಿಸುತ್ತಿದೆ ಎಂದು ಅರವಿಂದ ಶ್ರೀವಾಸ್ತವ್ ಹೇಳಿದರು.
ಮಂಗಳೂರು-ಹುಬ್ಬಳ್ಳಿಗೆ ವಿಶೇಷ ರೈಲು:ಶಿರಾಡಿ ಘಾಟ್ ಸಂಚಾರ ಬಂದ್ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ನಿಂದ ಹುಬ್ಬಳ್ಳಿ ವರೆಗೆ ಏಕಮುಖವಾಗಿ ಸೋಮವಾರ ವಿಶೇಷ ರೈಲು ಓಡಾಟ ನಿಗದಿಪಡಿಸಲಾಗಿದೆ. ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 11.30ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ವಯಾ ಮಡ್ಗಾಂವ್, ಲೋಂಡಾ ಮೂಲಕ ಹುಬ್ಬಳ್ಳಿಗೆ ಸಂಚರಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.