ಜುಲೈ ೧೦ರಿಂದ ಎಡನೀರು ಸ್ವಾಮೀಜಿ ಪಂಚಮ ಚಾತುರ್ಮಾಸ್ಯ ವ್ರತಾಚರಣೆ

| Published : Jul 09 2025, 12:18 AM IST

ಜುಲೈ ೧೦ರಿಂದ ಎಡನೀರು ಸ್ವಾಮೀಜಿ ಪಂಚಮ ಚಾತುರ್ಮಾಸ್ಯ ವ್ರತಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜು.೧೦ರಿಂದ ಸೆ.೭ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜು.೧೦ರಿಂದ ಸೆ.೭ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಜು.೧೦ರಂದು ಬೆಳಗ್ಗೆ ೮ ರಿಂದ ವ್ಯಾಸಪೂಜೆ, ಚಾತುರ್ಮಾಸ್ಯ ವ್ರತ ಸಂಕಲ್ಪ, ಹೋಮಗಳ ಪೂರ್ಣಾಹುತಿ. ಬೆಳಗ್ಗೆ ೯ ಗಂಟೆಯಿಂದ ೬೦ ದಿನಗಳ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಎಡನೀರು ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿಯಿಂದ ಭಜನೆಗೆ ಚಾಲನೆ ಸಿಗಲಿದೆ. ೧೧ ರಿಂದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿ ಸಂಗೀತ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅಪರಾಹ್ನ ೨.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ. ಶ್ರೀ ಮದ್ವಾಚಾರ್ಯ ಮೂಲ ಸಂಸ್ಥಾನಮ್ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದು, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸುವರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ೪.೩೦ರಿಂದ ವೇಣು ನಿನಾದ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಶಶಾಂಕ ಸುಬ್ರಹ್ಮಣ್ಯಂ ಚೆನ್ನೈ ಕೊಳಲಿನಲ್ಲಿ, ವಯಲಿನ್‌ನಲ್ಲಿ ವಿಠಲ ರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಪತ್ರಿ ಸತೀಶ್‌ಕುಮಾರ್ ಚೆನ್ನೈ ಸಾಥ್‌ ನೀಡಲಿದ್ದಾರೆ.

ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ: ಈ ಸಂದರ್ಭ ಶ್ರೀ ಎಡನೀರು ಮಠದ ಯೂಟ್ಯೂಬ್ ಚಾನೆಲ್ ‘ಆನಂದ ಭಾರತಿ’ ಲೋಕಾರ್ಪಣೆಯಾಗಲಿದೆ. ಉದ್ಯಮಿ ಇ.ಮಹಾಬಲೇಶ್ವರ ಭಟ್ ಅವರು ಚಾನೆಲ್‌ನ್ನು ಲೋಕಾರ್ಪಣೆಗೊಳಿಸುವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಸೀತಾರಾಮ ತೋಳ್ಪಡಿತ್ತಾಯ ಶುಭಾಶಂಸನೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.