ಮುಂಡರಗಿ: 12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಸಮೃದ್ಧವಾಗಿ ಬೆಳೆದ ವಚನ ಸಾಹಿತ್ಯವು ಕಾಲಾಂತರದಲ್ಲಿ ಗರ್ಭಗುಡಿ ಸೇರಿ ಅಳಿದುಹೋಗುವ ಹಂತದಲ್ಲಿದ್ದಾಗ ಅದನ್ನು ಪುನರುಜ್ಜೀವನಗೊಳಿಸಿ ಲಿಂಗಾಯತ ಧರ್ಮದ ತತ್ವಜ್ಞಾನ ಹಾಗೂ ಸಂಸ್ಕೃತಿಯನ್ನು ಉಳಿಸಿದ ಶ್ರೇಯಸ್ಸು ಎಡೆಯೂರಿನ ತೋಂಟದ ಸಿದ್ಧಲಿಂಗ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.ಶನಿವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ನಡೆದ ತೋಂಟದ ಸಿದ್ಧಲಿಂಗೇಶ್ವರ ಚರಿತಾಮೃತ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
12ನೇ ಶತಮಾನದ ನಂತರ ಕತ್ತಲೆಯಲ್ಲಿ ಸರಿದಿದ್ದ ವಚನ ಸಾಹಿತ್ಯವನ್ನು ನಂತರದಲ್ಲಿ ಬಂದ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಪುನಃ ಬೆಳಕಿಗೆ ತಂದರು. ತಮ್ಮ 701 ಜನ ಶಿಷ್ಯರೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ನಡೆಸಿದ ಅವರು, ಧರ್ಮ ಪ್ರಚಾರದ ಜತೆಗೆ ಚದುರಿಹೋಗಿದ್ದ ವಚನಗಳನ್ನು ಸಂಗ್ರಹಿಸಿ, ಸಂಕಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಪ್ರವಚನಕಾರ ಶರಣಬಸವ ದೇವರು ಮಂಗಲೋತ್ಸವದಲ್ಲಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ನಂತರ ಕನ್ನಡ ನಾಡಿನಲ್ಲಿ ಸಿದ್ಧಲಿಂಗೇಶ್ವರರಷ್ಟು ಪೂಜಿಸ್ಪಟ್ಟ ಹಾಗೂ ಪ್ರಸಿದ್ಧಿ ಪಡೆದ ಮತ್ತೊಬ್ಬ ಶಿವಯೋಗಿ ಇಲ್ಲ. ಇವರ ಕುರಿತು ಷಟ್ಪದಿ, ಸಾಂಗತ್ಯ, ಸ್ತೋತ್ರ, ನಾಮಾವಳಿ ಮುಂತಾದ ಅಪಾರ ಸಾಹಿತ್ಯ ರಚನೆಯಾಗಿದ್ದು, ಇವರು ಬಸವಾದಿ ಶರಣರ ತತ್ವಗಳನ್ನು ಪುನರುಜ್ಜೀವನಗೊಳಿಸಿ ಜಗತ್ತಿಗೆ ಸಾರಿದರು ಎಂದರು.
ನೇತೃತ್ವ ವಹಿಸಿದ್ದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, 15 ದಿನಗಳ ಕಾಲ ಜರುಗಿದ ಆಷಾಢ ಮಾಸದ ಪ್ರವಚನದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರರ ಚರಿತಾಮೃತ ಪ್ರವಚನವನ್ನು ಶರಣಬಸವ ದೇವರು ಚೆನ್ನಾಗಿ ವಿವರಿಸಿದರು. ಅದರಂತೆ ಪ್ರವಚನ ಸಮಿತಿಯವರು ಉತ್ತಮವಾಗಿ ಸಂಘಟಿಸಿ ಕಾರ್ಯನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.ಪ್ರವಚನ ಸಮಿತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 15 ದಿನಗಳಿಂದ ಜರುಗಿದ ಈ ಪ್ರವಚನವು ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಬಸವ ತತ್ವಗಳನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಮಮ್ಮಿಗಟ್ಟಿಯ ಬಸವಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ನಿಂಗು ಸೊಲಗಿ ಹಾಗೂ ಗದಗ ವಾಣಿಜ್ಯೋದ್ಯಮ ಸಂಸ್ಥೆಯಿಂದ ಶ್ರೇಷ್ಠ ವರ್ತಕ ಪ್ರಶಸ್ತಿ ಪಡೆದಿರುವ ಗೌತಮಚಂದ್ ಚೋಪ್ರಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಂಗಮ್ಮ ಕುರಕುಂದಿ, ಪ್ರವಚನ ಸಮಿತಿಯ ಬಸಯ್ಯ ಗಿಂಡಿಮಠ, ಶರಣಪ್ಪ ಕುಬಸದ, ಸುರೇಶ ಬಣಗಾರ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಶಿವಯೋಗಿ ಗಡ್ಡದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೊಟ್ರೇಶ ಅಂಗಡಿ ನಿರೂಪಿಸಿದರು.