ಸಾರಾಂಶ
ಬಂಡೀಪುರದ ಗೋಪಾಲಸ್ವಾಮಿ ಬೆಟ್ಟಕ್ಕೆ ಶುಕ್ರವಾರ ಸಂಜೆ ೪.೩೦ರ ಬಳಿಕ ಬೆಟ್ಟಕ್ಕೆ ತೆರಳುತ್ತಿರುವ ಇಡಿಸಿ ವಾಹನ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಸದಾ ಒಂದಲ್ಲ, ಒಂದು ಎಡವಟ್ಟಿನಿಂದ ಸುದ್ದಿ ಆಗುತ್ತಲೇ ಇದೆ. ಇತ್ತೀಚೆಗೆ ಮಲೆಯಾಳಂ ಸಿನಿಮಾ ಚಿತ್ರೀಕರಣ ವಿವಾದ, ಅದಕ್ಕೂ ಮೊದಲು ಹೋಂ ಸ್ಟೇಗಳಿಗೆ ಅನುಮತಿ ಸಂಬಂಧ ಪ್ರವಾಸೋದ್ಯಮ ಇಲಾಖೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪತ್ರ ಬರೆದು ಸುದ್ದಿಯಾಗಿತ್ತು.ಈಗ ಏ.೧೧ರ ಶುಕ್ರವಾರ ಸಂಜೆ ೪.೩೦ ರ ಬಳಿಕವೂ ಇಡಿಸಿಗೆ ಸೇರಿದ ಜೀಪಲ್ಲಿ ನಿಯಮ ಉಲ್ಲಂಘಿಸಿ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರು? ಭಕ್ತರನ್ನು ಬಂಡೀಪುರ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಕರೆದೋಯ್ದು ಸುದ್ದಿಯಾಗಿದ್ದಾರೆ ಎನ್ನಲಾಗಿದೆ. ಕೇರಳ ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಈಗ ಮತ್ತೊಂದು ಎಡವಟ್ಟು ಮಾಡಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಸಂಜೆ 4.30 ರ ಬಳಿಕ ನಿಷೇಧದ ನಡುವೆ ಜೀಪ್ ಬಿಟ್ಟಿದ್ದಾರೆ.ಸಾರಿಗೆ ಬಸ್‌ಗಳನ್ನು ಮಾತ್ರ 4 ಗಂಟೆ ತನಕ ಬೆಟ್ಟಕ್ಕೆ ಹೋಗಲು ಅವಕಾಶ ನೀಡುವ ಸಿಬ್ಬಂದಿ, ಇಡಿಸಿ ವಾಹನದಲ್ಲಿ ಕರೆದೊಯ್ಯುವುದನ್ನು ಏಕೆ ಬಿಟ್ಟಿದ್ದಾರೆ ಎಂದು ಪ್ರವಾಸಿಗರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸಂಜೆ ೪.೩೦ ರ ಬಳಿಕ ಇಡಿಸಿ ಜೀಪ್ ಬಿಟ್ಟ ಅರಣ್ಯ ಇಲಾಖೆಯ ಕಳ್ಳಾಟವನ್ನು ಮೊಬೈಲ್ ಮೂಲಕ ಸಾರ್ವಜನಿಕರೊಬ್ಬರು ಸೆರೆ ಹಿಡಿದ್ದಾರೆ. ಇದು ಸಾರ್ವಜನಿಕರು ಹಾಗೂ ಪ್ರವಾಸಿಗರ ಆಕ್ರೋಶಕ್ಕೂ ಕಾರಣರಾಗಿದೆ. ಶುಕ್ರವಾರ ಸಂಜೆ ೪.೩೦ರವರೆಗೆ ಬೆಟ್ಟಕ್ಕೆ ಹೋಗಲು ಅವಕಾಶವಿದೆ. ಗೋಪಾಲಸ್ವಾಮಿ ಬೆಟ್ಟಕ್ಕೆ ಇಡಿಸಿ ವಾಹನದಲ್ಲಿ ಕರೆದುಕೊಂಡು ಹೋಗಿ ಪ್ರವಾಸಿಗರಿಂದ ಹಣ ಕಟ್ಟಿಸಿಕೊಳ್ಳಲಾಗಿದೆ. ೪.೩೦ರವರೆಗೆ ಕಾದು ಬಸ್ ಸಿಗದೆ ಇದ್ದಾಗ ಇಡಿಸಿ ವಾಹನ ಹೋಗಿದೆಯಷ್ಟೆ.-ಬಿ.ಎಂ.ಮಲ್ಲೇಶ್, ಆರ್‌ಎಫ್‌ಒ, ಗೋಪಾಲಸ್ವಾಮಿ ಬೆಟ್ಟ