ಹರ್ಬಲ್ ಕಂಪನಿ ವಿರುದ್ಧ ಎಡೇಹಳ್ಳಿ ಗ್ರಾಮಸ್ಥರ ಆಕ್ರೋಶ

| Published : Apr 28 2024, 01:18 AM IST

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಮೊದಲನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಸೆಮಿ ಲ್ಯಾಬ್ಸ್ ಎಂಬ ಕಂಪನಿ ವಿರುದ್ಧ ಎಡೇಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಮೊದಲನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಸೆಮಿ ಲ್ಯಾಬ್ಸ್ ಎಂಬ ಕಂಪನಿ ವಿರುದ್ಧ ಎಡೇಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಎಡೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಈ ಖಾಸಗಿ ಕಂಪನಿಯಲ್ಲಿ ಹಲವಾರು ಟನ್ ಗಟ್ಟಲೇ ಹರ್ಬಲ್‌ಯುಕ್ತ ಕೆಮಿಕಲ್ ಘನ ತ್ಯಾಜ್ಯವನ್ನು ಮಣ್ಣಿನ ಮೇಲೆ ಒಣಗಿಸುತ್ತಾ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವುದರಿಂದ ಗ್ರಾಮಕ್ಕೆ ದುರ್ನಾನ ಆವರಿಸಿಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡಲಿರುವ ಆತಂಕದಿಮದ ಗ್ರಾಮಸ್ಥರು ಇದನ್ನು ಕೇಳಲು ಹೋದಾಗ ಕಂಪನಿ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಕಂಪನಿಯ ತ್ಯಾಜ್ಯ ಘಟಕ ಸ್ಥಗಿತ: ಕಂಪನಿಯ ಇಟಿಪಿ ಘಟಕ ಕಾರ್ಯ ನಿರ್ವಹಿಸದೇ ಇರುವುದರಿಂದ, ರಾಸಾಯನಿಕ ಯುಕ್ತ ಘನ ತ್ಯಾಜ್ಯವನ್ನು, ಡಬ್ಬಗಳಲ್ಲಿ ತುಂಬಿ ಕಂಪನಿಯ ಆವರಣದಲ್ಲೇ ಸುರಿದಿದ್ದಾರೆ. ಇದರಿಂದ ಗ್ರಾಮದ ಸುತ್ತು-ಮುತ್ತಲಿನ ಮನೆಗಳಿಗೆ ದುರ್ವಾಸನೆ ಬೀರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಪರಿಸರಕ್ಕೆ ಹಾನಿ:

ಖಾಸಗಿ ಕಂಪನಿ ಪಕ್ಕದ ನಿವಾಸಿ ಹರ್ಷ ಮಾತನಾಡಿ, ಕಳೆದ ಕೆಲ ತಿಂಗಳ ಹಿಂದೆ, ಗ್ರಾಮಕ್ಕೆ ಕೊರೆಯಿಸಿದ್ದ ಬೋರ್ ವೆಲ್ ನಲ್ಲೂ ಕಂಪನಿಯ ತ್ಯಾಜ್ಯ ಅಂತರ್ಜಲದಲ್ಲಿ ಮಿಶ್ರಿತವಾಗಿದ್ದು, ನೀರು ಕಲುಷಿತಗೊಂಡಿದೆ. ಪರಿಸರ ಇಲಾಖೆ ಸಹ ನೀರಿನ ಸ್ಯಾಂಪಲ್ ತೆಗೆದುಕೊಂಡು ಹೋಗಿದೆ. ಇದೀಗ ಮತ್ತೆ ತ್ಯಾಜ್ಯ ವಾಸನೆ ಹೆಚ್ಚಾಗಿದೆ, ಪಕ್ಕದಲ್ಲಿರುವ ಮಾವಿನ ತೋಟ ಹಾಳಾಗಿದೆ ಎಂದು ಹೇಳಿದರು.

ಕಿಲೋ ಮೀಟರ್‌ವರೆಗೂ ವ್ಯಾಪಿಸಿರುವ ದುರ್ನಾತ:

ಹರ್ಬಲ್ ಹಾಗೂ ಕೆಮಿಕಲ್ ಮಿಶ್ರಿತ ತ್ಯಾಜ್ಯ ಬಯಲಿನಲ್ಲಿ ಒಣಗಿಸುವುದರಿಂದ ಅದರ ದುರ್ನಾತ ಕಿಲೋ ಮೀಟರ್‌ವರೆಗೂ ವ್ಯಾಪಿಸಿದ್ದು ಗ್ರಾಮಸ್ತರಿಗೆ ರೋಗ ರುಜಿನಗಳು ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು ಈ ಬಗ್ಗೆ ಕಂಪನಿಯವರು ಉಡಾಫೆ ಉತ್ತರ ನೀಡುತ್ತಿದ್ದು, ಸ್ಥಳಕ್ಕೆ ಪರಿಸರ ಇಲಾಖೆಯ ಭೀಮ ಸೇನಾ ಗೋಗಿ ಭೇಟಿ ನೀಡಿ ಕಂಪನಿಯವರಿಗೆ ತರಾಟೆಗೆ ತೆಗೆದುಕೊಂಡು ತ್ಯಾಜ್ಯವನ್ನು ತೆರವುಗೊಳಿಸಲು ಆದೇಶಿಸಿದ್ದರೂ ತೆರವು ಮಾಡದೇ ಉದ್ದಟತನ ತೋರುತ್ತಿದ್ದಾರೆ. ಬಿಸಿಲಿನ ಝಳಕ್ಕೆ ದುರ್ನಾತ ಹೆಚ್ಚಾಗಿದೆ.

ಸಹಿ ಸಂಗ್ರಹ ಅಭಿಯಾನ:

ಕಂಪನಿಯಿಂದ ಪರಿಸರ ಮಾಲಿನ್ಯ ಹೆಚ್ಚಾಗಿದ್ದು ಗ್ರಾಮದಲ್ಲಿ ನೆಮ್ಮದಿಯಾಗಿ ಬದುಕು ನಡೆಸಲಾಗುತ್ತಿಲ್ಲ. ಸಂಪೂರ್ಣವಾಗಿ ಕಂಪನಿಯನ್ನು ಮುಚ್ಚಲು ಗ್ರಾಮಸ್ಥರಿಂದ ಸಹಿ ಸಂಗ್ರಹಿಸಿ ಅಧಿಕಾರಿಗಳು ಹಾಗೂ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಎಡೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ತೀರ್ಥ ಪ್ರಸಾದ್ ತಿಳಿಸಿದರು. ಘಟನೆ ಹಿನ್ನಲೆ ದಾಬಸ್‌ಪೇಟೆ ಪೊಲೀಸರು ಸೋಂಪುರ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.ಪೋಟೋ 1 : ಸೋಂಪುರ ಹೋಬಳಿಯ ಮೊದಲನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಸೆಮಿ ಲ್ಯಾಬ್ಸ್ ಎಂಬ ಕಂಪನಿಯವರು ಘನ ತ್ಯಾಜ್ಯವನ್ನು ಮಣ್ಣಿನ ಮೇಲೆ ಸುರಿದು ಒಣಗಿಸುತ್ತಿರುವುದು.ಪೋಟೋ 2 :

ಕಂಪನಿ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ.