ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನಸಮಾಜದಲ್ಲಿ ಹೆಚ್ಚಿನ ಗೌರವ ಕೊಡುವ ಇಲಾಖೆ ಎಂದರೆ ಅದು ಶಿಕ್ಷಣ ಇಲಾಖೆ ಮಾತ್ರ. ಶಿಕ್ಷಣದ ಜೊತೆ ಜೊತೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯತೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಅಭಿಪ್ರಾಯಪಟ್ಟರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಬಾಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ,ಪೊಲೀಸ್ ಇಲಾಖೆ, ಸಾಕ್ಷರತ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಏರ್ಪಡಿಸಲಾಗಿದ್ದ ತೆರೆದ ಮನೆ ಕಾರ್ಯಕ್ರಮ ದಡಿ ಪೋಕ್ಸೋ ಕಾಯ್ದೆ-೨೦೧೨ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ಇಲಾಖೆ ಇಲ್ಲದಿದ್ದರೂ ಜೀವನ ಮಾಡಬಹುದು ಆದರೇ ಶಿಕ್ಷಣ ಇಲ್ಲದೆ ಇದ್ದರೇ ಕಷ್ಟವಾಗುತ್ತದೆ. ಅನ್ನ, ನೀರು, ಬಟ್ಟೆ ಸೇರಿದಂತೆ ಸಾಮಾನ್ಯ ಸೌಲತ್ತು ಎನ್ನುವಂತೆ ವಿದ್ಯೆ ಕೂಡ ಆಗಿದೆ. ದೇಶ ಎಷ್ಟು ಅಭಿವೃದ್ಧಿಯಾಗುತ್ತಿದ್ರೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ.
ಈ ಪೈಕಿ ಮಕ್ಕಳ ಮೇಲೂ ಅನೇಕ ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿರುತ್ತವೆ. ಶಿಕ್ಷಕರಿಂದ ಮಕ್ಕಳ ಜೊತೆ ಅಸಭ್ಯ ವರ್ತನೆ ನಡೆಯುತ್ತಲೆ ಇದೆ. ನಾನು ಕೂಡ ಶಿಕ್ಷಕನ ಮಗನಾಗಿದ್ದು, ನಾನು ತುಂಬ ಗೌರವ ಕೊಡುವ ಇಲಾಖೆಯೊಂದಿದ್ದರೇ ಅದು ಶಿಕ್ಷಣ ಇಲಾಖೆ. ಆದರೇ ಈಗ ತುಂಬ ಬೇಸರದಿಂದ ಕೂಡ ಈ ಇಲಾಖೆ ಮೇಲೆ ಹೇಳುತ್ತಿದ್ದೇನೆ. ಶಿಕ್ಷಕನು ತನ್ನ ಕರ್ತವ್ಯವನ್ನು ತಿಳಿದುಕೊಳ್ಳುವವರೆಗೂ ಶಿಕ್ಷಣ ಇಲಾಖೆಯೂ ಕೂಡ ಒಳ್ಳೆಯದಾಗಲು ಸಾಧ್ಯವಿಲ್ಲ. ಹಾಗೇ ಮಕ್ಕಳು ಕೂಡ ಬೆಳೆಯಲು ಸಾಧ್ಯವಿಲ್ಲ ಎಂದು ಬೇಸರದಲ್ಲಿ ಹೇಳಿದರು.ಶಿಕ್ಷಕನಾದವರು ತನ್ನ ಯೋಗ್ಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದಿಂದ ಒಂದು ಸಮಾಜವನ್ನು ತಿದ್ದಲು ಸಾಧ್ಯ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆ ಸಂಸ್ಕಾರ ಕೂಡ ಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ಹರಿಸುವ ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳು, ಪೋಷಕರು, ಶಿಕ್ಷಕರು ಸೇರಿ ಪ್ರತಿಯೊಬ್ಬರಿಗೂ ತಿಳಿದುಕೊಳ್ಳಬೇಕಾದ ಹಕ್ಕಿದೆ ಎಂದು ಸಲಹೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಪೋಕ್ಸೋ ಕಾಯ್ದೆ ಏನಿದೆ ಅನ್ಯಾಯಕ್ಕೆ ದೌರ್ಜನ್ಯಕ್ಕೆ ಮಕ್ಕಳು ಒಳಗಾಗುತ್ತಿರುವ ಬಗ್ಗೆ ನೋಡುತ್ತಿದ್ದೇವೆ. ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ. ಈ ಜಗತ್ತಿನೆ ಮೊಬೈಲ್ ಫೋನ್ ಪರಿಚಯವಾದ ಮೇಲೆ ಇದರಲ್ಲಿ ಎಷ್ಟು ಒಳಿತು ಇದೆ ಅಷ್ಟೆ ಕೆಟ್ಟದು ಕೂಡ ಕಾಣಬಹುದು. ಇದು ನಮ್ಮ ಆಯ್ಕೆ ಮೇಲೆ ನಿರ್ಧಾರವಾಗುತ್ತದೆ ಎಂದರು. ೮ನೇ ತರಗತಿ ಓದುವ ಮಕ್ಕಳು ಕೂಡ ಸ್ಮಾರ್ಟ್ ಪೋನ್ ಕೊಡಿಸುವಂತೆ ಪೋಷಕರ ಮೇಲೆ ಒತ್ತಾಯ ಹಾಕಲಾಗುತ್ತಿದೆ. ಇನ್ನು ಮೊಬೈಲ್ ಪೋನ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಆಗಿರುವ ಪ್ರಕರಣ ನೋಡಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಪೋಕ್ಸೋ ಕಾಯ್ದೆ-೨೦೧೨ರ ಪ್ರತಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ, ಡಿವೈಎಸ್ಪಿ ಮುರುಳೀಧರ್, ಹಿರಿಯ ಸಾಹಿತಿ ರೂಪಹಾಸನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಲಕ್ಷ್ಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಸಿಂಹ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಶಾಲಾ ಮಕ್ಕಳು ಹಾಗೂ ಇತರರು ಇದ್ದರು.