ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮೇಲೆ ಸಾಕಷ್ಟು ನಂಬಿಕೆ, ವಿಶ್ವಾಸ ಇಟ್ಟು ಶಾಲೆ-ಕಾಲೇಜುಗಳಿಗೆ ಕಳುಹಿಸುತ್ತಾರೆ. ಆ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಶಿಕ್ಷಣಿಕವಾಗಿ ನೀವು ಅಭಿವೃದ್ಧಿ ಹೊಂದಿದರೆ ಭವಿಷ್ಯದಲ್ಲಿ ಸಾಕಷ್ಟು ಯಶಸ್ಸು ಕಾಣಲು ಸಾಧ್ಯ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಬಹಳ ಮುಖ್ಯವಾಗಿದೆ. ಪೋಷಕರ ನಂಬಿಕೆ, ವಿಶ್ವಾಸಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ಗ್ರಾಪಂ ಸದಸ್ಯ, ಉದ್ಯಮಿ ಹಾಗೂ ಶಾಲೆ ಹಿರಿಯ ವಿದ್ಯಾರ್ಥಿ ಹೆಗ್ಗಡಹಳ್ಳಿ ಎಚ್.ಜೆ.ರಾಮಕೃಷ್ಣ ಹೇಳಿದರು.

ಪಟ್ಟಣದ ವಿದ್ಯಾ ಪ್ರಚಾರ ಸಂಘ(ವಿಜಯಕಾಲೇಜು) ಸಭಾಂಗಣದಲ್ಲಿ ನಡೆದ ವಿಜಯ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರೋಪದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮೇಲೆ ಸಾಕಷ್ಟು ನಂಬಿಕೆ, ವಿಶ್ವಾಸ ಇಟ್ಟು ಶಾಲೆ-ಕಾಲೇಜುಗಳಿಗೆ ಕಳುಹಿಸುತ್ತಾರೆ. ಆ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಶಿಕ್ಷಣಿಕವಾಗಿ ನೀವು ಅಭಿವೃದ್ಧಿ ಹೊಂದಿದರೆ ಭವಿಷ್ಯದಲ್ಲಿ ಸಾಕಷ್ಟು ಯಶಸ್ಸು ಕಾಣಲು ಸಾಧ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್, ಟಿವಿ, ಮದ್ಯಪಾನ, ಧೂಮಪಾನ, ಡ್ರಕ್ಸ್ , ಕ್ರಿಕೆಟ್ ಬೆಟ್ಟಿಂಗ್ ನಂತಹ ಹಲವು ದುಶ್ಚಟಕ್ಕೆ ಒಳಗಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿ ಸಮಾಜದ ಏಳಿಗೆಗೆ ಶ್ರಮಿಸಿದ ಸಾಕಷ್ಟು ಮಹಾನೀಯರು, ಶ್ರೇಷ್ಠ ವ್ಯಕ್ತಿಗಳು ನಮ್ಮ ಕಣ್ಣ ಮುಂದಿದ್ದಾರೆ. ಅವರ ಸಾಧನೆಗಳು ನಮಗೆ ಕಾಣುವಂತೆ ನೀವು ಮಾದರಿಯಾಗಿ ಬದುಕಬೇಕು ಎಂದರು.

ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ವಿದ್ಯಾರ್ಥಿಗಳಿಗೆ ಶುಭಕೋರಿ ತೆರಳಿದರು. ಇದೇ ವೇಳೆ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂದವು. ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ಪ್ರಾಂಶುಪಾಲ ಕೆ.ಆರ್.ಮಹದೇವಯ್ಯ, ಉಪಾಧ್ಯಕ್ಷೆ ಶಾಂತಮ್ಮ, ಕಾರ್ಯದರ್ಶಿ ಬಿ.ಎಸ್.ಗೋಪಾಲ್, ಖಜಾಂಚಿ ಎನ್.ರಾಮೇಗೌಡ, ನಿರ್ದೇಶಕರಾದ ಕೆ.ಸೋಮಶೇಖರ್, ಡಾ.ಎಂ.ಮಾಯಿಗೌಡ, ಎಲ್.ಡಿ.ರವಿ, ಲೋಕನಾಥ್, ಕೆ.ಬಿ.ಕುಮಾರ್, ಸುಂದರಮ್ಮ, ಕೆ.ಬಾಬು, ಮರಿಸ್ವಾಮೀಗೌಡ, ಸಿ.ಬಿ.ಚಂದ್ರಶೇಖರ್, ಪಿ.ಎಸ್.ಲಿಂಗರಾಜು ಸೇರಿದಂತೆ ಶಾಲೆಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.