ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಅನ್ಯಭಾಷೆ ಕಲಿಯುವುದು ತಪ್ಪಲ್ಲ, ಆದರೆ, ವಿಶ್ವದಲ್ಲಿಯೇ ಶ್ರೀಮಂತ ಸಂಸ್ಕೃತಿ ಹೊಂದಿರುವ ಕನ್ನಡ ಭಾಷೆಯ ಬಳಕೆ ಕಡಿಮೆ ಆಗಬಾರದು. ಕನ್ನಡ ಉಳಿಸಿ ಬೆಳೆಸಿ ಎಂದು ಹೇಳುವ ಬದಲು ಪ್ರತಿನಿತ್ಯ ವ್ಯವಹಾರದಲ್ಲಿ ಬಳಸಿದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ. ಮಾತೃಭಾಷೆ ಉಸಿರಾಗಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಚ್. ಶಿವರಾಮೇಗೌಡ ಹೇಳಿದರು.ಪಟ್ಟಣದ ಎಸ್ಎಸ್ಎಂಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಥಣಿ ತಾಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಗಡಿನಾಡು ಕನ್ನಡೋತ್ಸವ -2024 ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದೇಶಿ ಸಂಸ್ಕೃತಿ ಮತ್ತು ಅನ್ಯಭಾಷೆಗಳಿಗೆ ಮಾರುಹೋಗಿ ನಮ್ಮತನ ಮರೆಯಬಾರದು. ಅನ್ಯಭಾಷೆ ಗೌರವಿಸಿ ಮಾತೃಭಾಷೆ ಕನ್ನಡವನ್ನು ಪ್ರೀತಿಸಿ. ಕನ್ನಡ ಪದಗಳಲ್ಲಿರುವ ಶ್ರೀಮಂತಿಕೆ ಅನ್ಯಭಾಷೆಗಳಲ್ಲಿ ಇಲ್ಲ.ಕನ್ನಡ ಅನ್ನದ, ಬದುಕಿನ, ಉಸಿರಿನ ಭಾಷೆಯನ್ನಾಗಿ ಪ್ರತಿನಿತ್ಯ ಬಳಸಿದಾಗ ಮಾತ್ರ ಕನ್ನಡ ಉಳಿಸಿ ಬೆಳೆಸಲು ಸಾಧ್ಯವಿದೆ ಎಂದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ.ಬಾಳಸಾಹೇಬ ಲೋಕಪುರ ಮಾತನಾಡಿ, ಗಡಿಭಾಗಗಳಲ್ಲಿ ಕನ್ನಡತನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಹೋರಾಟ ಮತ್ತು ಕಾರ್ಯಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕರವೇ ಉ.ಕ. ವಿಭಾಗೀಯ ಅಧ್ಯಕ್ಷ ಮಹಾಂತೇಶ ರಂಗಟ್ಟಿಮಠ ಮಾತನಾದರು. ಅಥಣಿ ಪುರಸಭೆ ಅಧ್ಯಕ್ಷ ಶಿವಲೀಲಾ ಸದಾಶಿವ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಬೀರಪ್ಪ ಯಕ್ಕಂಚಿ, ಸಾಹಿತಿ ಡಾ.ಆರ್.ಎಸ್. ದೊಡ್ಡ ಲಿಂಗಪ್ಪಗೋಳ, ಡಾ.ಅರ್ಚನಾ ಅಥಣಿ ಮಾತನಾಡಿ, ದೇಶ ವಿದೇಶಗಳಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆ ಪಸರಿಸುವ ಮತ್ತು ಕನ್ನಡ ಭಾಷೆಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನದಿಂದ ಶ್ರಮಿಸಬೇಕು. ಕನ್ನಡಿಗರಿಗೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸೇನಾನಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಜಿಲ್ಲಾ ಕರವೇ ಅಧ್ಯಕ್ಷ ವಾಜಿದ್ ಹಿರೇಕುಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗಡಿನಾಡು ಕನ್ನಡ ರತ್ನ ಪಶಸ್ತಿ ಪ್ರದಾನ:
ಗಡಿಭಾಗದಲ್ಲಿ ಕನ್ನಡ ನಾಡು-ನುಡಿ, ನೆಲ ಜಲ, ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಕಾರ್ಯಕ್ರಮ ಮಾಡುತ್ತಿರುವ ಸಮಾಜ ಸೇವಕ , ವಕೀಲ ಕೆ.ಎ. ವನಜೋಳ, ಹೋರಾಟಗಾರ ಪ್ರಶಾಂತ ತೋಡಕರ, ಸಾಹಿತಿ ಡಾ.ಪ್ರಿಯಂವದಾ ಹುಲಗಬಾಳಿ, ಹಿರಿಯ ಪತ್ರಕರ್ತ ಸಿ.ಎ. ಇಟ್ನಾಳಮಠ, ರೈತಪರ ಹೋರಾಟಗಾರ ಶ್ರೀಶೈಲ ಜನಗೌಡರ, ದೈಹಿಕ ಶಿಕ್ಷಕಿ ಶೋಭಾ ಕುಲಕರ್ಣಿ, ಕನ್ನಡದ ವೈದ್ಯ ಡಾ.ರಮೇಶ ಗುಳ್ಳ, ಸಾಕ್ಸೋಫೋನ್ ವಾದಕ ರಾಮು ಭಜಂತ್ರಿ, ಶಿಲ್ಪಿ ದಶರಥ ಮೊಪಗಾರ, ವಿಶೇಷ ಚೇತನ ಅಭಿಯಂತರ ರಾಹುಲ್ ಕಾರಚಿ ಮುತ್ತು ಗಡಿಭಾಗದ ಅತ್ಯುತ್ತಮ ಕನ್ನಡ ಶಾಲೆ ಆಜೂರು ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಗಡಿನಾಡು ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಿಜೇತರಿಗೆ ಬಹುಮಾನ ವಿತರಣೆಃ69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನ.24ರಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಶುದ್ಧ ಕನ್ನಡ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪದಕ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯೋಗ ಶಿಕ್ಷಕ, ಸಾಹಿತಿ ಎಸ್.ಕೆ. ಹೊಳೆಪ್ಪನವರ, ಅಪ್ಪಾಸಾಹೇಬ ಅಲಿಬಾದಿ, ಪ್ರಾಚಾರ್ಯ ಡಾ.ಬಿ.ಎಸ್. ಕಾಂಬಳೆ, ವಕೀಲ ಕಲ್ಲಪ್ಪ ವಣಜೋಳ, ಎಂ.ಎ. ಬಸಾಪುರ, ಸತ್ಯಪ್ಪ ಗಾಡಿವಡ್ಡರ, ರೇಷ್ಮಾ ಕಿತ್ತೂರು, ಮಹಾದೇವಿ ಕೋಳಿ, ಸಲೀಂ ಖಾಲಿಖಾನ, ಅಕ್ಬರ್ ಸಡೆಕರ, ದಿಲಾವರ್ ಪಿಂಗಾರಿ, ಜಗನ್ನಾಥ ಬಾವನೆ, ಮಹಾದೇವ ಮಡಿವಾಳ, ನಿಜಪ್ಪ ಹಿರೇಮನಿ, ಪ್ರದೀಪ ಜಾಧವ, ಸುಶಾಂತ ಪಟ್ಟಣ, ಮುರುಗೇಶ ಬಳ್ಳೊಳ್ಳಿ, ಶಿವಶಂಕರ ಬಡಿಗೇರ, ದಾವಲ ಮಕಂದರ, ಹಣಮಂತ ಕುರುಬರ, ಶೋಭಾ ಮಾಳಿ, ಹಣಮವ್ವ ದಂಡಗಿ, ಅಣ್ಣಪ್ಪ ದರೂರು, ಅನಿಲ್ ಭಜಂತ್ರಿ ಸೇರಿದಂತೆ ಇತರರು ಇದ್ದರು. ಅಥಣಿ ಘಟಕದ ಅಧ್ಯಕ್ಷ ಉದಯ ಮಾಕಾಣಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಪ್ರಸ್ತಾವಿಕವಾಗಿ ಮಾತನಾಡಿದರು. ಕಲಾವಿದ ವಿಜಯ ಹುದ್ದಾರ ನಿರೂಪಿಸಿದರು. ಕರವೇ ಕಾರ್ಯದರ್ಶಿ ರಾಜು ವಾಘಮಾರೆ ವಂದಿಸಿದರು.