ಸಾರಾಂಶ
ವಿದ್ಯಾರ್ಥಿಗಳು ವಚನ ಸಾಹಿತ್ಯ ಓದಬೇಕು. ಈ ಮೂಲಕ ಶಿಕ್ಷಣದಲ್ಲಿ ಬೆಳಕು, ಜೀವನದಲ್ಲಿ ಧೈರ್ಯ ಹಾಗೂ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬಹುದು. ಈ ಧರೆಗೆ ದೊಡ್ಡವರಾಗಲು ಸಂಕಲ್ಪ ನಮ್ಮೊಳಗೆ ಇರಬೇಕು. ಇಲ್ಲದೇ ಹೋದರೆ ದಡ್ಡರಾಗುತ್ತೇವೆ.
ಧಾರವಾಡ:
ಜ್ಞಾನಿಗಳಾದಾಗ, ವಿಚಾರವಂತರಾದಾಗ ಮಾತ್ರ ಸಂಪೂರ್ಣ ಮೌಢ್ಯದಿಂದ ಮುಕ್ತರಾಗಲು ಸಾಧ್ಯ. ಆದರೆ, ನಮ್ಮಲ್ಲಿ ವಿದ್ಯಾವಂತರೇ ಹೆಚ್ಚು ಮೌಢ್ಯಗಳಿಗೆ ಬಲಿಯಾಗುತ್ತಿದ್ದು, ಶಾಸ್ತ್ರ, ಪಂಚಾಂಗ, ಹೊತ್ತಿಗೆಗಳು ನಮ್ಮ ಬದುಕಿನ ದಾರಿ ತಪ್ಪಿಸುತ್ತಿವೆ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ನಿರಂತರವಾಗಿ ನಡೆಸುತ್ತಿರುವ ‘ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂದು ಶರಣರು ವಚನ ಸಾಹಿತ್ಯದಲ್ಲಿ ಹೇಳಿದರೂ, ಪೂಜಾರಿ, ಪುರೋಹಿತರನ್ನು ನಂಬಿ ನಾವು ಅನೇಕ ದೇವರಿಗೆ ದಾಸರಾಗುತ್ತಿದ್ದೇವೆ. ಹತ್ತು ಹಲವು ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ಜಾತಿ ಡೊಂಬರು:
ವಿದ್ಯಾರ್ಥಿಗಳು ವಚನ ಸಾಹಿತ್ಯ ಓದಬೇಕು. ಈ ಮೂಲಕ ಶಿಕ್ಷಣದಲ್ಲಿ ಬೆಳಕು, ಜೀವನದಲ್ಲಿ ಧೈರ್ಯ ಹಾಗೂ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬಹುದು. ಈ ಧರೆಗೆ ದೊಡ್ಡವರಾಗಲು ಸಂಕಲ್ಪ ನಮ್ಮೊಳಗೆ ಇರಬೇಕು. ಇಲ್ಲದೇ ಹೋದರೆ ದಡ್ಡರಾಗುತ್ತೇವೆ ಎಂದ ಶಿವಾಚಾರ್ಯರು, ಏನು, ಏಷ್ಟು ಓದಿದರೂ ಅದು ಮುಖ್ಯವಲ್ಲ. ಮಾತು ಮತ್ತು ಕೃತಿ ಒಂದಾಗಿರುವುದು ಮಾತ್ರ ಮುಖ್ಯ. ನಮ್ಮ ಮಾತು, ಕೃತಿ ಒಂದಿಲ್ಲ ಎಂದರೆ ಅವರನ್ನು ಜಾತಿ ಡೊಂಬರು ಎಂದು ಬಸವಣ್ಣನವರು ಲೇವಡಿ ಮಾಡಿದ್ದಾರೆ. ಇಂತಹ ಜಾತಿ ಡೊಂಬರ ಸಂಖ್ಯೆ ಮಠ-ಮಾನ್ಯಗಳಲ್ಲೂ ಇದೆ. ಮನೆ-ಮನೆಗಳಲ್ಲೂ ಇದೆ. ಇಡೀ ಸಮಾಜ ಹಾಗೂ ದೇಶದಲ್ಲಿದೆ. ಇದನ್ನು ಸರಿ ಮಾಡಲು ಸಾಧ್ಯವಿದ್ದು, ಅದು ನನ್ನಿಂದಲೇ ಪ್ರಾರಂಭವಾಗಬೇಕು ಎಂದರು.ಪ್ರಸ್ತುತ ನಾಡಿನ ಸ್ಥಿತಿ ಗಮನಿಸಿದರೆ, ಇನ್ನೊಬ್ಬರ ದೋಷಗಳನ್ನು ತಿದ್ದಲು ಉಪದೇಶ ಮಾಡುವವರು ಹೆಚ್ಚಾಗಿದ್ದಾರೆ. ಉಪದೇಶಕ್ಕೆ ತಕ್ಕಂತೆ ತಮ್ಮ ಬದುಕು ಕಟ್ಟಿಕೊಳ್ಳುವರು ಕಡಿಮೆಯಾಗಿದ್ದಾರೆ. ಹೀಗಾಗಿ ನಾಡಿನಲ್ಲಿ ಹಗರಣಗಳ ಸಂಖ್ಯೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಆ ಸಾಲಿಗೆ ಸೇರಬಾರದು ಎಂಬುದು ನಮ್ಮ ಆಶಯ ಎಂದು ಶ್ರೀಗಳು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿದ್ಯಾರ್ಥಿಗಳ ಭವಿಷ್ಯ, ಜ್ಞಾನದ ಕ್ಷೀತಿಜ ಹೆಚ್ಚಾಗಬೇಕು. ನಾಡಿನ ಸಂಸ್ಕೃತಿಯ ಅರಿವು ಪಡೆಯಬೇಕು. ಜತೆಗೆ ಹಿರಿಯರ ಮಾರ್ಗದರ್ಶನ, ಹಿರಿಯರ ದಾರಿ ಅವಲೋಕಿಸಿ ನಿಮ್ಮ ದಾರಿ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಆರ್‌ಎಲ್‌ಎಸ್ ಪಿಯುಸಿ, ಹೈಸ್ಕೂಲ್ ವಿದ್ಯಾರ್ಥಿಗಳಿದ್ದರು. ಡಾ. ಪಂಡಿತಾರಾಧ್ಯ ಶಿವಾಚಾರ್ಯರ ಬದುಕು ಮತ್ತು ಕೊಡುಗೆ ಕುರಿತು ಹೊಳಲಕೆರೆಯ ಚಂದ್ರಶೇಖರ ತಾಳ್ಯ ಹಾಗೂ ಚಿತ್ರದುರ್ಗದ ಡಾ. ಲೋಕೇಶ ಅಗಸನಕಟ್ಟೆ ಮಾತನಾಡಿದರು. ಸಂಘದ ವಿಶ್ವೇಶ್ವರಿ ಹಿರೇಮಠ ಸಂಯೋಜನೆ ಮಾಡಿದರು.