ಸಾರಾಂಶ
ಹಳಿಯಾಳ: ಸೈಬರ್ ದಾಳಿಗೆ ಹೆಚ್ಚು ಜ್ಞಾನವಿದ್ದವರು, ಕಲಿತವರು, ಮಾಹಿತಿ ತಂತ್ರಜ್ಞಾನವುಳ್ಳವರೇ ಬಲಿಪಶುವಾಗುತ್ತಿದ್ದಾರೆ. ಅದಕ್ಕಾಗಿ ಸೈಬರ್ ಅಪರಾಧದಿಂದ ಬಚಾವಾಗಲು ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲ್ಲಿ ಸೈಬರ್ ವಂಚಕರಿಂದ ಪಾರಾಗಬಹುದು ಎಂದು ಸೈಬರ್ ಕಾನೂನು ತಜ್ಞ ಡಾ.ಅನಂತ ಪ್ರಭು ಗುರುಪುರ ಹೇಳಿದರು.
ಶನಿವಾರ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಭಾಂಗಣದಲ್ಲಿ ವಿ.ಆರ್.ಡಿ.ಎಂ ಟ್ರಸ್ಟ್ ಹಾಗೂ ಪೋಲಿಸ್ ಇಲಾಖೆ ಹಾಗೂ ಕಾನೂನು ಇಲಾಖೆಯ ಜಂಟಿ ಸಹಯೋಗದಲ್ಲಿ ಆಯೋಜಿಸಿದ ಸೈಬರ್ ಅಪರಾಧ ಮುಕ್ತ ಹಳಿಯಾಳ ಜನಜಾಗೃತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.ಸೈಬರ್ ಅಪರಾಧಿಗಳು ನಿರಂತರವಾಗಿ ಹೊಸದಾಳಿಯ ವಿಧಾನಗಳನ್ನು ಆವಿಷ್ಕರಿಸುತ್ತಾರೆ. ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿರುವ ಜಗತ್ತು ಅದರ ಜೊತೆಯಲ್ಲಿ ತನ್ನ ಬದುಕಿನ ಸುತ್ತ ತನಗೆ ಅರಿವಿಲ್ಲದಂತೆ ಸಂಕಷ್ಟ ವಂಚನೆಗಳಿಗೆ ಮುಕ್ತ ದಾರಿಯನ್ನು ಮಾಡಿಕೊಟ್ಟಿದೆ ಎಂದರು.
ಮೊಬೈಲ್ ಬಳಕೆ ಈಗ ಅನಿವಾರ್ಯವಾಗಿ ಬಿಟ್ಟಿದ್ದು, ಬೇಕಾಬಿಟ್ಟಿ ಬಳಕೆಯಿಂದಾಗಿ ನಾವು ಯಾರು ಸುರಕ್ಷಿತವಾಗಿಲ್ಲ ಎಂದರು. ಅದಕ್ಕಾಗಿ ಸ್ಮಾರ್ಟಫೋನ್‌ಗಳಲ್ಲಿನ ಸುರಕ್ಷಿತಾ ವಿಧಾನಗಳನ್ನು ಬಳಕೆ ಮಾಡುವುದನ್ನು ನಾವು ರೂಢಿಸಿಕೊಳ್ಳಬೇಕಾಗಿದೆ ಎಂದರು. ಆದಷ್ಟು ನಮ್ಮ ವೈಯಕ್ತಿಕ ಬದುಕಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ನಿಯಂತ್ರಿಸಬೇಕು ಎಂದರು.ಸೈಬರ ಅಪರಾಧವನ್ನು ತಡೆಗಟ್ಟಲು ಉದ್ದವಾದ, ಸಂಕೀರ್ಣವಾದ ಮತ್ತು ಭೇದಿಸಲು ಸುಲಭವಲ್ಲದ ಬಲವಾದ ಪಾಸ್‌ವರ್ಡ್‌ಗಳನ್ನು ಬಳಸುವುದರ ಜೊತೆಯಲ್ಲಿ ಇಮೇಲ್ ಸಂದೇಶಗಳಲ್ಲಿ ಅನುಮಾನಸ್ಪದ ಲಿಂಕ್‌ಗಳನ್ನು ತಪ್ಪಿಸಬೇಕು ಎಂದರು.
ವಂಚನೆಗಳಿಂದ ಜಾಗೃತ:ತಮ್ಮ ಉಪನ್ಯಾಸದಲ್ಲಿ ಅವರು ಎಟಿಎಂ ಕಾರ್ಡ್ ವಂಚನೆ, ಒಎಲ್‌ಎಕ್ಸ್, ಕ್ವೀಕರ್ ಆನ್ಲೈನ್ ವಂಚನೆ, ಉದ್ಯೋಗ ವಂಚನೆ, ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ, ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ ಬೆದರಿಕೆ, ಹಣದಾಸೆಗೆ ದಾಖಲಾತಿಗಳ ಮಾರಾಟದ ಆಮಿಷ, ಅಪರಿಚಿತ ಲಿಂಕ್ ಕ್ಲಿಕ್ ಮೂಲಕ ವಂಚನೆ, ವಾಟ್ಸಪ್ ವಿಡಿಯೋ ಕಾಲ್ ಮೂಲಕ ವಂಚನೆ, ಕೆವೈಸಿ ಅಪ್‌ಡೇಟ್ ಮಾಡುವ ಬಗ್ಗೆ ವಂಚನೆ, ಗಿಪ್ಟ್ ಹೆಸರಲ್ಲಿ ನಡೆದಿರುವ ವಂಚನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಚಿತ್ರವಾಗಿ ವಿವರಿಸಿ ಸೈಬರ್ ವಂಚನೆಗೊಳಗಾದಲಲಿ ತಕ್ಷಣ 1930 ನಂಬರಿಗೆ ಕರೆಮಾಡಿ, ಅಥವಾ ಸೈಬರ ಕ್ರೈಮ್ ರೀಪೋಟಿಂಗ್ ಪೋರ್ಟಲ್ಲಿ ದೂರು ಸಲ್ಲಿಸುವ ಅವಶ್ಯಕತೆಯ ಬಗ್ಗೆ ತಿಳಿ ಹೇಳಿದರು.
ವಿ.ಆರ್.ಡಿ.ಎಂ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ವಿಆರ್.ಡಿಎಂ ಟ್ರಸ್ಟ್ ಆರಂಭಗೊಂಡು 20 ವರ್ಷಗಳಾಗುತ್ತಿದ್ದು, ಅದಕ್ಕಾಗಿ ಕಳೆದ ಮೂರು ತಿಂಗಳಲ್ಲಿ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟು ಕೊಂಡು 20 ಕಾರ್ಯಕ್ರಮಗಳನ್ನು ಆರೋಗ್ಯ ಶಿಬಿರಗಳನ್ನು ಸೈಬರ್ ಜನಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.ಕಾರ್ಯಾಗಾರಕ್ಕೆ ಹಳಿಯಾಳ ಜೆಎಂಎಫ್ಸಿ ನ್ಯಾಯಾಧೀಶರಾದ ನಾಗಮ್ಮಾ ಇಚ್ಛಂಗಿ, ದೇಶಭೂಷಣ ಕೌಜಲಗಿ ಚಾಲನೆ ನೀಡಿದರು.
ದಾಂಡೇಲಿ ವಲಯದ ಡಿವೈಎಸ್ಪಿ ಶಿವಾನಂದ ಮದರಖಂಡಿ, ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಹಳಿಯಾಳ ಪಿಎಸೈ ವಿನೋದ ರೆಡ್ಡಿ, ಎ.ಪಿ.ಪಿ ರಮೇಶ ಬಂಕಾಪುರ, ಹಳಿಯಾಳ ವಕೀಲರ ಸಂಘದ ಅಧ್ಯಕ್ಷ ಸುಂದರ ಕಾನಕತ್ರಿ ಇದ್ದರು.ಕಾರ್ಯಾಗಾರದಲ್ಲಿ ದಾಂಡೇಲಿ ವಿಭಾಗದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ, ಕಾನೂನು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಕೀಲರು, ಕೆ.ಎಲ್.ಎಸ್ ಸಂಸ್ಥೆಯ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.22ಎಚ್.ಎಲ್.ವೈ-1