ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ದಾನಗಳಲ್ಲಿ ಶ್ರೇಷ್ಠವಾದುದು ವಿದ್ಯಾ ದಾನವಾಗಿದೆ. ಅದು ವ್ಯಕ್ತಿಯ ಬದುಕಿನ ಕೊನೆಯ ತನಕ ಕಾಪಾಡುತ್ತದೆ. ವಿದ್ಯಾವಂತರು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಪಟ್ಟಣದ ಶಾಂತಿ ಗ್ರ್ಯಾಂಡ್ ಹೋಟೇಲ್ ಭವನದಲ್ಲಿ ಅಂಜುಮನ್-ಎ-ಇಸ್ಲಾಂ ಕಮೀಟಿ ಲೋಕಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಪ್ರತಿದಿವಸ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ. ಕೇವಲ ತಾಯಿಯಂದಿರೇ ಅಭ್ಯಾಸ ಮಾಡಿಸಬೇಕು ಎಂಬ ಕೀಳರಿಮೆ ಬಿಟ್ಟು ತಂದೆ-ತಾಯಿ ಒಟ್ಟಿಗೆ ಸೇರಿ ಮಕ್ಕಳಿಗೆ ಅಭ್ಯಾಸ ಮಾಡಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಕನಸು ಬಿತ್ತುವ ಕೆಲಸವನ್ನು ಹೆತ್ತವರು ಮಾಡಬೇಕಿದೆ. ಅವರ ಸಾಧನೆಗೆ ಅದು ಪ್ರೇರಣೆಯಾಗುತ್ತದೆ. ಸಾಧನೆಯಲ್ಲಿ ಹೆತ್ತವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮದ ಅಗತ್ಯವಿದೆ. ಶಿಕ್ಷಣ ಪುಕ್ಕಟ್ಟೆಯಾಗಿ ಸಿಗುವ ವಸ್ತುವಲ್ಲ. ಅದಕ್ಕೆ ಶ್ರಮ ಮತ್ತು ಪ್ರಯತ್ನ ಬೇಕಾಗಿದೆ ಎಂದು ಹೇಳಿದರು.ಹಿರಿಯ ವಕೀಲ ಐ.ಎಚ್. ಅಂಬಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಾಲಾ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ, ಮೊದಲಿಗೆ ತಾನು ಏನಾಗಬೇಕು ಎಂಬ ಗುರಿ ಹೊಂದಬೇಕು. ಬಳಿಕ ಆ ಗುರಿ ತಲುಪಲು ಏನು ಮಾಡಬೇಕು ಎಂಬ ದಾರಿ ಕಂಡುಕೊಳ್ಳಬೇಕು. ಈ ಬಾರಿ ಪಡೆದ ಅಂಕಗಳಿಂದ ಮುಂದಿನ ಬಾರಿ ಹೆಚ್ಚು ಅಂಕ ಪಡೆಯುವ ಸೆಲ್ಫ್ ಟಾರ್ಗೆಟ್ ಅಳವಡಿಕೊಂಡು ಅದಕ್ಕಾಗಿ ಪ್ರತಿಜ್ಞೆ ಕೈಗೊಂಡು ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಮಾತನಾಡಿ, ಶಿಕ್ಷಣಕ್ಕೆ ಮಾತ್ರ ಭವಿಷ್ಯ ರೂಪಿಸಿಕೊಡುವ ಶಕ್ತಿ ಇದೆ ಎಂಬುವುದು ಯಾರೂ ಮರೆಯಬಾರದು. ಮಕ್ಕಳಿಗೆ ಹಣ, ಆಸ್ತಿ ಸಂಪಾದಿಸುವ ಬದಲು ಶಿಕ್ಷಣವನ್ನೇ ದೊಡ್ಡ ಸಂಪತ್ತಾಗಿ ಮಾಡಬೇಕು. ಮುಸ್ಲಿಂ ಹೆಣ್ಣು ಮಕ್ಕಳಿಗೂ ಪುರುಷರಂತೆ ಸಮಾನವಾಗಿ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು. ಡಿವೈಎಸ್‌ಪಿ ಸೈಯ್ಯದ ರೋಶನ ಜಮೀರ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ಸಹಕಾರಿ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ, ವಿಶೇಷ ಉಪನ್ಯಾಸಕರಾಗಿ ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕಿ ಸಾಯಿರಾಬಾನು ನದಾಫ್ ಮಾತನಾಡಿದರು.ರಫೀಕ್ ಭೈರಕದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಲಾಸಾಬ ಯಾದವಾಡ, ಶಮಶುದ್ಧಿನ್ ರಾಮದುರ್ಗ, ಮೈಹಿಬೂಬ ಡಿ, ಮದರಖಾನ್ ಅವರಿಗೆ ಗೌರವ ಸನ್ಮಾನ ನೀಡಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾಥಿಗಳಿಗೆ ₹5000 ನಗದು, ಬ್ಯಾಗ್, ನೋಟ್‌ಬುಕ್ ನೀಡಿ ಸತ್ಕರಿಸಲಾಯಿತು.
ಬೀಳಗಿ ಧರ್ಮ ಗುರು ಮೌಲಾನಾ ಅಬ್ದುಲ್ ವಹಾಬ ಸಾನ್ನಿಧ್ಯ ವಹಿಸಿದ್ದರು. ಹಸನ್ ಡೋಂಗ್ರಿ ಮಹಾಲಿಂಗಪುರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ಗಣಿ ಉದ್ಯಮಿ ಎಂ.ಎಂ. ವಿರಕ್ತಮಠ, ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ನಾಮ ನಿರ್ದೇಶಕ ಗೋವಿಂದ ಕೌಲಗಿ, ಹೊಳಬಸು ದಂಡಿನ, ಅಂಜುಮನ್-ಎ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಉಪಾಧ್ಯಕ್ಷ ಸೈದುಸಾಬ ನದಾಫ್, ಕಾರ್ಯದರ್ಶಿ ಸಾಧಿಕಖಾನ್ ಪಠಾಣ, ಖಜಾಂಜಿ ಮಹ್ಮದರಫೀಕ್ ಭಾಗವಾನ, ಗೌರವ ಸದಸ್ಯರಾದ ರಫೀಕ್ ಭೈರಕದಾರ, ಅಬ್ದುಲ್ ರೆಹೆಮಾನ್ ತೊರಗಲ್, ಕುತುಬುದ್ಧಿನ್ ಅತ್ತಾರ, ಸೈಯದ್ ಚಿತ್ರಭಾನುಕೋಟಿ, ಶಬ್ಬೀರ್ ಚೌಧರಿ, ಸೈಯದಸಾಬ ಗುದಗಿ, ಅಬ್ದುಲ್‌ರಜಾಕ್ ಮುಲ್ಲಾ, ಸೈದುಸಾಬ ನಧಾಪ್, ರಿಯಾಜ್‌ಅಹ್ಮದ ಮಕಾನದಾರ, ನಜೀರ್ ತೊರಗಲ್ ಹಾಗೂ ಸ್ಥಳೀಯ ಹಾಗೂ ಸುತ್ತಮುತ್ತಲಿನ ಮುಸ್ಲಿಂ ಸಮಾಜದ ಮುಖಂಡರು, ಪದಾಧಿಕಾರಿಗಳು, ಸ್ಥಳೀಯರು ಇದ್ದರು.