ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಪಡೆದ ವಿದ್ಯಾರ್ಥಿಗಳು ದೇಶಕ್ಕೆ ದೊಡ್ಡ ಆಸ್ತಿಯಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೬೦೦ಕ್ಕೂ ಹೆಚ್ಚು ಅಂಕ ಗಳಿಸಿದ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮಕ್ಕಳಿಗೆ ಹಾಗೂ ತಾಲೂಕಿನ ಎಲ್ಲಾ ಪ್ರೌಢಶಾಲಾ ಶಿಕ್ಷಕರಿಗೆ ಶಾಸಕ ಸಿಮೆಂಟ್ ಮಂಜು ಅವರು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ೫ನೇ ಸ್ಥಾನ ಹಾಗೂ ಜಿಲ್ಲೆಯ ೮ ತಾಲೂಕುಗಳಲ್ಲಿ ಸಕಲೇಶಪುರ ತಾಲೂಕು ನಂ. ೧ ಸ್ಥಾನ ಪಡೆದಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ.ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಂಕಗಳನ್ನು ಪಡೆಯಲು ಕಾರಣ ಎಂದರೆ ಶಿಕ್ಷಕರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಶಿಕ್ಷಕರು ಕಾರಣರಾಗಿದ್ದು, ದೇಶದ ಅಭಿವೃದ್ದಿ ಎಷ್ಟು ಮಕ್ಕಳು ಶಿಕ್ಷಣ ಪಡೆಯುತ್ತಾರೆಂಬುದರ ಮೇಲೆ ನಿಂತಿದೆ. ಎಲ್ಲಿ ಉತ್ತಮ ಶಿಕ್ಷಣ, ಉತ್ತಮ ಸಂಸ್ಕಾರ ಸಿಗುತ್ತದೆಯೋ ಅಂತಹ ಕಡೆ ಮಕ್ಕಳು ದೇಶದ ಆಸ್ತಿಯಾಗುತ್ತಾರೆ. ಮಲೆನಾಡು ಭಾಗದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ, ಕಾಡಾನೆಗಳ ಕಾಟ, ವಿಪರೀತ ಮಳೆ, ಶಿಕ್ಷಕರ ಕೊರತೆ ನಡುವೆ ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ, ಮಕ್ಕಳು ಉತ್ತಮ ಅಂಕ ಪಡೆದರೆ ಶಿಕ್ಷಕರಿಗೆ ಮೌಲ್ಯ ದೊರಕುತ್ತದೆ. ಶಿಕ್ಷಕರು ದೇವರ ಸ್ಥಾನದಲ್ಲಿ ನಿಂತು ಮಕ್ಕಳಿಗೆ ಶಿಕ್ಷಣ ನೀಡುತ್ತೀರಾ. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡವನ್ನು ಮೀರಿಸಿ ಶಿಕ್ಷಣದ ಕ್ರಾಂತಿ ಇಲ್ಲಿ ಆಗಬೇಕು. ಇದಕ್ಕೆ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡಲು ನಾವೆಲ್ಲರು ಕೈಜೋಡಿಸೋಣ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಮಾತನಾಡಿ, ಸಕಲೇಶಪುರ ತಾಲೂಕು ಅತ್ಯಂತ ವಿಭಿನ್ನವಾದ ತಾಲೂಕಾಗಿದೆ. ಭೌಗೋಳಿಕವಾಗಿ ವಿಸ್ತೀರ್ಣ ದೊಡ್ಡದು. ಆದರೆ ಶಿಕ್ಷಕರ ಸಂಖ್ಯೆ ಕಡಿಮೆಯಿದೆ. ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು ಈ ಬಾರಿ ರಾಜ್ಯದಲ್ಲಿ ೫ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಕಷ್ಟಕರ ಪರಿಸ್ಥಿತಿಯಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಶಾಲೆಗಳಲ್ಲಿ ಶಿಕ್ಷಕರೆ ಇರುವುದಿಲ್ಲ, ಅತಿಥಿ ಶಿಕ್ಷಕರು ಹಲವು ವಿಷಯಗಳಿಗೆ ಸಿಗುತ್ತಿಲ್ಲ. ಆದರೂ ಸಹ ತಾಲೂಕಿನ ಶಿಕ್ಷಕರು ವಿದ್ಯಾರ್ಥಿಗಳ ಏಳಿಗೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಇಂದು ತಾಲೂಕು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಕಾರಣವಾಗಿದೆ. ವಿದ್ಯಾರ್ಥಿಗಳ ಏಳಿಗೆಯಲ್ಲಿ ಪೋಷಕರ ಪಾತ್ರ ದೊಡ್ಡದಾಗಿದೆ. ೮ ಸರ್ಕಾರಿ ಶಾಲೆಗಳು ತಾಲೂಕಿನಲ್ಲಿ ಶೇ. ೧೦೦% ಫಲಿತಾಂಶ ಪಡೆದಿದೆ ಹಾಗೂ ಒಟ್ಟಾರೆಯಾಗಿ ತಾಲೂಕು ಶೇ.೯೩.೫% ಪಡೆದು ಜಿಲ್ಲೆಯ ಶೇಕಡವಾರು ಫಲಿತಾಂಶಕ್ಕಿಂತ ಶೇ. ೧೧ % ಅಧಿಕವಾಗಿದ್ದು ಹೀಗಾಗಿ ಜಿಲ್ಲೆ ರಾಜ್ಯದಲ್ಲಿ ೬ನೇ ಸ್ಥಾನ ಪಡೆಯಲು ಸಕಲೇಶಪುರದ ಪಾತ್ರ ದೊಡ್ಡದಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಕೂಲಿ ಕಾರ್ಮಿಕರ ಮಕ್ಕಳೆ ಹೆಚ್ಚಾಗಿದ್ದಾರೆ. ೬೦೦ಕ್ಕೂ ಹೆಚ್ಚುಅಂಕವನ್ನು ತಾಲೂಕಿನಲ್ಲಿ ೩೬ ವಿದ್ಯಾರ್ಥಿಗಳು ಪಡೆದಿದ್ದಾರೆ. ಶಾಸಕರು ಈ ರೀತಿ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾರವರನ್ನು ಸನ್ಮಾನಿಸಲಾಯಿತು.ಈ ಸಂರ್ಧಭದಲ್ಲಿ ಬಿಜೆಪಿ ಮುಖಂಡರುಗಳಾದ ಬಾಳ್ಳು ಮಲ್ಲಿಕಾರ್ಜುನ್, ಬ್ಯಾಕರವಳ್ಳಿ ಜಯಣ್ಣ, ಪ್ರತಾಪ್, ಅಶ್ವಥ್, ರಾಮಚಂದ್ರೇ ಗೌಡ, ಪುರಸಭಾ ಸದಸ್ಯೆ ವನಜಾಕ್ಷಿ, ಡಾ. ಸುಧಾಕರ್, ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆನಂದ್, ಜಗದೀಶ್, ರೇಣುಕಾರಾದ್ಯ, ಮಲ್ನಾಡ್ ಜಾಕೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
===============ಫೋಟೋ:೧ಎಸ್.ಕೆ.ಪಿ.ಪಿ೧ ಸಕಲೇಶಪುರ ಪಟ್ಟಣದ ಸಂತ ಜೋಸೆಫರ ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.