ಗದಗ: ಆಧುನಿಕ ದಿನಗಳಲ್ಲಿ ಶಿಕ್ಷಣಕ್ಕೆ ಇರುವ ಪ್ರಾಮುಖ್ಯತೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ಸಂಸ್ಕಾರ ಪಡೆಯಬೇಕು. ಇದರಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಉದ್ದಿಮೆದಾರ ಎಚ್.ಡಿ. ಕಾಟವಾ ತಿಳಿಸಿದರು. ನಗರದ ಅಂಬಾಭವಾನಿ ದೇವಸ್ಥಾನದ ಮುನ್ನುಬಾಯಿ ಈಶ್ವರಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಎಸ್‌ಎಸ್‌ಕೆ ಸಮಾಜ ಹಾಗೂ ಬೆಂಗಳೂರಿನ ಡಾ. ಎನ್.ವಿ. ಬದಿ ಎಜುಕೇಶನಲ್‌ ಆ್ಯಂಡ್‌ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಜರುಗಿದ ಎಸ್ಎಸ್‌ಕೆ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳು ಶಿಕ್ಷಣ ಪಡೆದು ಉನ್ನತ ಸಾಧನೆಯತ್ತ ಗಮನ ಕೊಡುವುದು ಎಷ್ಟು ಮುಖ್ಯವೋ ಅದೇ ರೀತಿ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಅಷ್ಟೇ ಮುಖ್ಯ. ಧಾರ್ಮಿಕ ಪ್ರಜ್ಞೆ ಹಾಗೂ ಶ್ರೇಷ್ಠ ಸಂಸ್ಕಾರಗಳಿದ್ದರೆ ಶಿಕ್ಷಣಕ್ಕೆ ಇನ್ನೂ ಮೆರುಗು ಬರುತ್ತದೆ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ನಿರಂತರ ಶ್ರಮ ಹಾಗೂ ಶ್ರದ್ಧೆಯಿಂದ ಕಲಿಯುವುದು ಅವಶ್ಯಕವಾಗಿದೆ ಎಂದರು. ಜಗದೀಶ್ ಬದಿ ಮಾತನಾಡಿ, ಶಿಕ್ಷಣ ಬದುಕನ್ನು ಬದಲಿಸಲು ಸಾಧ್ಯವಿರುವ ಅಸ್ತ್ರ. ಯಾವುದೇ ಹಿನ್ನೆಲೆಯಿಂದ ಬಂದರೂ ಸುಶಿಕ್ಷಿತರಾಗಿ ಬಾಳಿದರೆ ಸಮಾಜದಲ್ಲಿ ಗೌರವಯುತ ಸ್ಥಾನ ಸಿಗಲು ಸಾಧ್ಯ ಎಂದರು.ಚಾರ್ಟರ್ಡ್‌ ಅಕೌಂಟಟ್‌ ಶಂಕರಸಾ ಲದವಾ ಮಾತನಾಡಿ, ಶಿಕ್ಷಣದಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವುದರ ಜತೆಗೆ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳಿಗೆ ಅನುಗುಣವಾದ ಕೌಶಲಗಳನ್ನು ಸಹ ರೂಢಿಸಿಕೊಳ್ಳಬೇಕು. ಶಿಕ್ಷಣ ಹಾಗೂ ಕೌಶಲ್ಯ ಇದ್ದಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಈ ವೇಳೆ ಪರಶುರಾಮಸಾ ಮಿಸ್ಕಿನ್‌, ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಕೆ ಸಮಾಜ ಪಂಚ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಲೋಕನಾಥ ಕಬಾಡಿ ಮಾತನಾಡಿದರು. ಜಗದಂಬಾ ಶಿಕ್ಷಣ ಸಂಸ್ಥೆ ಚೇರಮನ್ ಗೋವಿಂದರಾಜ ಬಸವಾ, ಎಸ್ಎಸ್‌ಕೆ ತರುಣ ಸಂಘದ ಅಧ್ಯಕ್ಷ ನಾರಾಯಣಸಾ ಕಬಾಡಿ, ಅಂಬಿಕಾ ರಂಗ್ರೇಜ ಇತರರು ಇದ್ದರು. ಜಿ.ವಿ. ಬಸವಾ ಸ್ವಾಗತಿಸಿದರು. ಗಣಪತಿ ಭಟ್‌ ನಿರೂಪಿಸಿದರು. ದತ್ತು ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಶ್ರೀ ಕಲಬುರ್ಗಿ ಪ್ರಾರ್ಥಿಸಿದರು. ಪ್ರಕಾಶ ಮಿಸ್ಕಿನ್‌ ವಂದಿಸಿದರು.