ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಶಿಕ್ಷಣ ಮತ್ತು ಆರೋಗ್ಯ ಸಂಪೂರ್ಣವಾಗಿ ವ್ಯಾಪಾರೀಕರಣವಾಗುತ್ತಿದ್ದು, ಇದು ನೋವಿನ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ತಿಳಿಸಿದರು.ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಸಕ್ಷಮ್ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು ಉಳಿದು, ಬೆಳೆದಾಗ ಜನಸಾಮಾನ್ಯರು, ಬಡವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಸುಲಭವಾಗಿ ದೊರಕಲು ಸಾಧ್ಯವಾಗುತ್ತದೆ. ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದು ಹರ್ಷದಾಯಕ ಸಂಗತಿಯಾಗಿದ್ದು, ಇದು ಎಲ್ಲ ಶಾಲೆಗಳಲ್ಲೂ ಸಾಕಾರಗೊಳ್ಳುವಂತಾಗಬೇಕು ಎಂದರು.
ಮಂಗಳೂರು ಜಿಲ್ಲಾ ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕ ಗುರುಪ್ರಸಾದ್ ಅತ್ನಿ ಮಾತನಾಡಿ, ಗುರುಗಳು ಕೊಡುವ ಜ್ಞಾನವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿ ರೂಪುಗೊಳ್ಳಬೇಕು ಎಂದರು.ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಸೈನ್ಯದಿಂದ ನಿವೃತ್ತಿಯಾಗಿ ಓದಿದ ಶಾಲೆಯನ್ನು ನೋಡಲು ಬಂದಾಗ ಇಲ್ಲಿನ ದುಸ್ಥಿತಿ ಬೇಸರ ತರಿಸಿತು. 90ರ ದಶಕದಲ್ಲಿ ಶಾಲೆ ಕಲಿತ ತಮ್ಮ ತಂಡದ ಸ್ನೇಹಿತರಲ್ಲಿ ಚರ್ಚಿಸಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಎಲ್ಲರ ಸಹಕಾರದಿಂದ ಶಾಲೆಗೆ ಅಗತ್ಯ ನೆರವು ಕಲ್ಪಿಸಿದ್ದೇವೆ. ಇದನ್ನು ಈ ಶಾಲೆಗೆ ಮಾತ್ರವಲ್ಲದೆ ಇತರೆ ಶಾಲೆಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಬೇಲೂರೇಗೌಡ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ರವಿಕುಮಾರ್, ನಿವೃತ್ತ ಶಿಕ್ಷಕರಾದ ಸುಶೀಲಮ್ಮ, ದೇವರಾಜ್ ಮಾತನಾಡಿದರು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಾಗೂ ಬೆರೆಡೆ ಕಾರ್ಯ ನಿರ್ವಹಿಸುತ್ತಿರುವ 36 ಶಿಕ್ಷಕರಿಗೆ ಗುರುವಂದನೆ ನೀಡಿ ಸನ್ಮಾನಿಸಲಾಯಿತು.ಉತ್ತಮ ಕಾರ್ಯ ನಿರ್ವಹಣೆಗಾಗಿ ಎಎಸ್ ಐ ದೇವರಾಜ್, ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ಚಾಲಕ ಶಂಭುಲಿಂಗೇಗೌಡ, ಪೌರ ಕಾರ್ಮಿಕ ರಂಗಸ್ವಾಮಿ, ಉತ್ತಮ ಪ್ರತಿಭೆಗಾಗಿ ಧವನಿ, ಅಕ್ಷತಾ ಅವರನ್ನು ಗೌರವಿಸಲಾಯಿತು.
ಪಪಂ ಉಪಾಧ್ಯಕ್ಷ ಸುಬಾನ್ ಷರೀಫ್, ಸದಸ್ಯ ರಮೇಶ್ ವಾಟಾಳ್, ಕ್ಷೇತ್ರ ಸಮನ್ವಯಾಧಿಕಾರಿ ಬಾಲರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕ್ಲಸ್ಟರ್ ಅಧಿಕಾರಿ ರೂಪ, ರಂಗನಾಥ್, ವೆಂಕಟೇಶ್ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ನಡೆಸಿದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಬಿಇಒ ಕಚೇರಿಯಿಂದ ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಸಲಾಯಿತು.