ಹಣದಿಂದ ವಿದ್ಯೆ, ಜ್ಞಾನಾರ್ಜನೆ ಪಡೆಯಲು ಸಾಧ್ಯವಿಲ್ಲ: ಪ್ರೊ.ಎಂ.ರಂಗಸ್ವಾಮಿ

| Published : Dec 18 2024, 12:45 AM IST

ಹಣದಿಂದ ವಿದ್ಯೆ, ಜ್ಞಾನಾರ್ಜನೆ ಪಡೆಯಲು ಸಾಧ್ಯವಿಲ್ಲ: ಪ್ರೊ.ಎಂ.ರಂಗಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶ, ವಿದೇಶದಲ್ಲಿ ನೀಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳಿಗೆ ಹಲವು ಟೆಕ್ನಾಲಜಿಗಳನ್ನು ಬಳಸಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಶಾಲೆ ಶಿಕ್ಷಣದ ಗುಣಮಟ್ಟವನ್ನು ಕಂಡು ರಾಜ್ಯದ ಮೂಲೆಮೂಲೆಗಳಿಂದ ಪೋಷಕರು ಮಕ್ಕಳನ್ನು ತಂದು ಎಸ್‌ಟಿಜಿ ಶಿಕ್ಷಣ ದಾಖಲಿಸುತ್ತಿರುವುದು ಖುಷಿಯ ವಿಚಾರವಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕೇವಲ ಹಣದಿಂದ ವಿದ್ಯೆ, ಜ್ಞಾನಾರ್ಜನೆ ಕೊಂಡುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಪರಿಶ್ರಮದಿಂದ ಮಾತ್ರ ಪಡೆಯಬಹುದು ಎಂದು ಯೂನಿಯನ್ ಬ್ಯಾಂಕ್‌ನ ಮಾಜಿ ಉಪ ಪ್ರಧಾನ ವ್ಯವಸ್ಥಾಪಕ ಪ್ರೊ.ಎಂ.ರಂಗಸ್ವಾಮಿ ಹೇಳಿದರು.

ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪಬ್ಲಿಕ್ ಶಾಲೆಯ ದಶಮಾನೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ವಿದ್ಯೆ ವಿದ್ಯಾರ್ಥಿಗಳ ಬದುಕು ರೂಪಿಸಲಿದೆ. ಸಮಾಜದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಶಿಕ್ಷಣ ಅಗತ್ಯವಾಗಿದೆ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಗುರಿ ಇಟ್ಟುಕೊಂಡು ಎಸ್‌ಟಿಜಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಸಂಸ್ಥೆ ಆರಂಭಗೊಂಡು ಹತ್ತು ವರ್ಷವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಪುಟ್ಟರಾಜು ಅವರು ಕಂಡ ಕನಸ್ಸು ನನಸ್ಸಾಗಿದೆ ಎಂದರು.

ದೇಶ, ವಿದೇಶದಲ್ಲಿ ನೀಡುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳಿಗೆ ಹಲವು ಟೆಕ್ನಾಲಜಿಗಳನ್ನು ಬಳಸಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಶಾಲೆ ಶಿಕ್ಷಣದ ಗುಣಮಟ್ಟವನ್ನು ಕಂಡು ರಾಜ್ಯದ ಮೂಲೆಮೂಲೆಗಳಿಂದ ಪೋಷಕರು ಮಕ್ಕಳನ್ನು ತಂದು ಎಸ್‌ಟಿಜಿ ಶಿಕ್ಷಣ ದಾಖಲಿಸುತ್ತಿರುವುದು ಖುಷಿಯ ವಿಚಾರವಾಗಿದೆ ಎಂದು ಬಣ್ಣಿಸಿದರು.

ರಾಜ್ಯದಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಮುಚ್ಚುತ್ತಿದೆ. ಶೇ.50ರಷ್ಟು ಎಂಜಿನಿಯರಿಂಗ್ ಕಾಲೇಜುಗಳು ದಾಖಲಾತಿ ಕೊರತೆಯಿಂದ ಮುಚ್ಚುತ್ತಿರುವುದು ವಿಷಾದನೀಯ. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಎಲ್ಲರಿಗೂ ಪ್ರಮುಖವಾಗಿದೆ ಎಂದರು.

ಕಳೆದ ಎರಡು ದಶಕಗಳ ಹಿಂದೆ ರಾಜ್ಯದಲ್ಲಿ ಒಬ್ಬರು ಅಥವಾ ಇಬ್ಬರು ಐಎಎಸ್, ಐಪಿಎಸ್ ಪಾಸ್ ಮಾಡುತ್ತಿದ್ದರು. ಈಗ ವರ್ಷಕ್ಕೆ 40 -50 ಮಂದಿ ರಾಜ್ಯದ ವಿದ್ಯಾರ್ಥಿ ಐಎಎಸ್, ಐಪಿಎಸ್ ಪಾಸ್ ಮಾಡುತ್ತಿದ್ದಾರೆ. ಎಸ್‌ಟಿಜಿ ಸಂಸ್ಥೆ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಮ್ಮೂರಿನ ನನ್ನ ಸ್ನೇಹಿತರು, ಬಂಧುಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ನಗರ ಪ್ರದೇಶಕ್ಕೆ ಹೋಗುತ್ತಿರುವುದನ್ನು ಕಂಡು ಆ ಮಕ್ಕಳಿಗೆ ನಗರ ಪ್ರದೇಶದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಯಿತು ಎಂದರು.

ಸಂಸ್ಥೆ ಆರಂಭಿಸಲು ಸಿಇಒ ಆದ, ನನ್ನ ಪುತ್ರ ಸಿ.ಪಿ.ಶಿವರಾಜು ಅವರೊಂದಿಗೆ ಚರ್ಚಿಸಿ 2014ರಲ್ಲಿ ನನ್ನ ತೋಟದ ಮನೆಯಲ್ಲಿ ಕೇವಲ 63 ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆ ಆರಂಭಿಸಿದೆವು. ಪೋಷಕರ ಆಶೀರ್ವಾದದಿಂದ ಪ್ರಸ್ತತ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಸಂಸ್ಥೆ ಕಷ್ಟದಲ್ಲಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಸಾಲಸೌಲಭ್ಯ ನೀಡಿ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಿದರು ಎಂದು ಸ್ಮರಿಸಿದರು.

ನಾನು ಶಾಸಕನಾಗಿದ್ದ 2006ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಆಯಿತು. ಸ್ವಾತಂತ್ರ್ಯಬಂದ ಬಳಿಕ ಎಷ್ಟು ಶಾಲೆಗಳಿದ್ದವೂ ಅದರ ಎರಡರಷ್ಟು ಶಾಲೆಗಳಲ್ಲಿ ಆರಂಭಿಸಬೇಕೆಂದು ತೀರ್ಮಾನಿಸಿದರು. ಆ ವರ್ಷ ನನ್ನ ಕ್ಷೇತ್ರಕ್ಕೆ 12 ಪ್ರೌಢಶಾಲೆಗಳು, 5 ಪದವಿ ಪೂರ್ವ ಕಾಲೇಜು, 3 ಡಿಗ್ರಿ ಕಾಲೇಜು, ಹೋಬಳಿಗೆ ಎರಡರಂತೆ 5 ವಸತಿ ಶಾಲೆ ಮಂಜೂರು ಮಾಡಿಸಿ ಈ ಭಾಗದ ಮಕ್ಕಳು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಿದ್ದೇನೆ ಎಂದರು.

ಮಂಡ್ಯದ ಎರಡು ಉಪವಿಭಾಗದಲ್ಲಿ ಮಂಡ್ಯ ಉಪ ವಿಭಾಗದಲ್ಲಿ ಕೆ.ವಿ.ಶಂಕರೇಗೌಡರು ಹಾಗೂ ಜಿ.ಮಾದೇಗೌಡರು ಉತ್ತಮವಾದ ಶಿಕ್ಷಣ ಸಂಸ್ಥೆ ಕಟ್ಟಿಬೆಳೆಸಿದ್ದಾರೆ. ಅಂತಹ ಮಹಾನ್ ನಾಯಕರ ಸಾಲಿನಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಪಾಂಡವಪುರ ಉಪವಿಭಾಗದಲ್ಲಿ ಶಾಲೆ ಆರಂಭಿಸಿದ್ದೇನೆ. ಈ ಸಂಸ್ಥೆ ಸದಾ ಮಕ್ಕಳು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದರು.

ಇದೇ ವೇಳೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕಗಳಿಸಿದ ಶಾಲೆ ವಿದ್ಯಾರ್ಥಿ ಎಚ್.ಎ.ದುವನ್‌ಗೌಡ ಅವರನ್ನು ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಅಭಿನಂಧಿಸಿದರು. ಕಳೆದ ಹತ್ತು ವರ್ಷದಿಂದ ಉತ್ತಮ ಸೇವೆ ಸಲ್ಲಿಸಿದ ಅತ್ಯುತ್ತಮ ಶಿಕ್ಷಕರನ್ನು ಅಭಿನಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿದ ಹಲವಾರು ಹಾಡುಗಳಿಗೆ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು.

ಸಮಾರಂಭದಲ್ಲಿ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ತನುಶ್ರೀ ಶಿವರಾಜು, ಜಿಪಂ ಮಾಜಿ ಸದಸ್ಯೆ ನಾಗಮ್ಮ ಪುಟ್ಟರಾಜು, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಟ್ರಸ್ಟಿ ತಮ್ಮಣ್ಣಗೌಡ, ಆಡಳಿತಾಧಿಕಾರಿ ನಿವೇಧಿತ ನಾಗೇಶ್, ಪ್ರಾಂಶುಪಾಲೆ ಮಾಚಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.