ಸಾರಾಂಶ
ವಿಜ್ಞಾನ ವಸ್ತುಪ್ರದರ್ಶನ । ಅಭಿಮತ । ನಿಡಗೋಡು ಶಾಲೆಯಲ್ಲಿ ವಿಜ್ಞಾನ ಲೋಕ ಅನಾವರಣ । ಕರಕುಶಲ ವಸ್ತುಗಳು, ವಿಜ್ಞಾನದ ಮಾದರಿಗಳ ಪ್ರದರ್ಶನ
ಕನ್ನಡಪ್ರಭ ವಾರ್ತೆ ಬೇಲೂರುಶಿಕ್ಷಣವು ಮಕ್ಕಳ ಒಳಗಿನ ಸುಪ್ತ ಮನಸ್ಸನ್ನು ಜಾಗೃತಗೊಳಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ಸಭ್ಯತೆಯನ್ನು ಕಲಿಯಬೇಕು. ಇದನ್ನು ಕಲಿಸುವುರಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಆಗ ಮಾತ್ರ ನಾವು ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿನ ಎನ್.ನಿಡಗೋಡು ಯುನೈಟೆಡ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ಆಯೋಜಿಸಿದ್ದ ವಿಜ್ಞಾನ ಮತ್ತು ಕರಕುಶಲ ವಸ್ತುಪ್ರದರ್ಶನವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿಜ್ಞಾನವು ಒಂದು ವ್ಯವಸ್ಥಿತವಾದ ಅಧ್ಯಯನ. ಇಂದು ಪ್ರತಿಯೊಂದು ವಿಜ್ಞಾನದ ಆಧಾರಿತವಾಗಿವೆ. ವಿದ್ಯಾರ್ಥಿಗಳು ಸ್ವಂತಿಕೆಯಿಂದ ಯೋಚಿಸಿದಾಗ ವಿಜ್ಞಾನಕ್ಕೆ ಅಪಾರ ಕೊಡುಗೆ ಸಲ್ಲಿಸಬಹುದು. ಮಕ್ಕಳನ್ನು ವಿಜ್ಞಾನ ಮತ್ತು ಸಾಮಾಜಿಕವಾಗಿ ಸೆಳೆಯುವ ಮೂಲಕ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಎಂದು ಹೇಳಿದರು.
ಪ್ರತಿನಿತ್ಯ ವಿಜ್ಞಾನದ ಆವಿಷ್ಕಾರಗಳು ಹೆಚ್ಚುತ್ತಿವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಮುಂದುವರಿಸಬೇಕು. ವಿಜ್ಞಾನವು ನಮ್ಮ ಭವಿಷ್ಯ. ವಿದ್ಯಾರ್ಥಿಗಳು ಮೊದಲು ನಿಮ್ಮ ಜೀವನದಲ್ಲಿ ಯೋಜನೆಯನ್ನು ರೂಪಿಸಿಕೊಂಡು ಅದರ ಪ್ರಕಾರವೇ ತಮ್ಮ ಭವಿಷ್ಯದ ಭದ್ರ ಬುನಾದಿ ಹಾಕಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಕಡೆಗೆ ಹೆಜ್ಜೆ ಇಡಬೇಕು ಎಂದರು.ಸಂಸ್ಥೆಯ ಕಾರ್ಯದರ್ಶಿ ಎಂ.ಡಿ.ದಿನೇಶ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ವಿಜ್ಞಾನ ಮತ್ತು ಕರಕುಶಲ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದೇವೆ. ಪೋಷಕರು ಸಹ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಉತ್ತಮ ಬೆಂಬಲ ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಹಲವಾರು ರೀತಿಯ ಆವಿಷ್ಕಾರದ ರೀತಿ ಪ್ರಯೋಗಗಳನ್ನು ಮಾಡಿ ಪ್ರದರ್ಶಿಸುತ್ತಿರುವುದು ಮಕ್ಕಳಿಗೆ ವಿಜ್ಞಾನದ ಕಡೆಗೆ ಒಲವು ಎಷ್ಟಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಲಿ ಎಂಬುದು ನಮ್ಮ ಆಶಯ. ವಿಜ್ಞಾನವು ಪ್ರತಿ ಸೆಂಕೆಂಡಿಗೂ ಬೆಳೆಯುತ್ತದೆ. ಅದರೊಂದಿಗೆ ನಾವೂ ಕೂಡ ಬೆಳೆಯಬೇಕು. ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ ಜತೆಗೆ ಪರಿಸರವನ್ನು ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮೆಲ್ಲರದ್ದು ಎಂದರು.ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿಜ್ಞಾನ ಮತ್ತು ಕರಕುಶಲ ವಸ್ತುಪ್ರದರ್ಶನ ಮಾಡಿದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಮಾಹಿತಿ ಪಡೆದರು.
ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ತಂತ್ರಜ್ಞಾನ, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ಧತಿ, ಆಧುನಿಕ ಮನುಷ್ಯರ ಜೀವನಶೈಲಿ, ಯಂತ್ರಗಳ ಬಳಕೆ ಐತಿಹಾಸಿಕ ಸ್ಥಳಗಳು ಸೇರಿ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ವಿಜ್ಞಾನ ಮಾದರಿಯ ಪರಿಕರಗಳು ಗಮನ ಸೆಳೆದವು.ಸಂಸ್ಥೆಯ ಅಧ್ಯಕ್ಷ ವಿ.ಎಸ್.ಬೋಜೇಗೌಡ, ಖಜಾಂಚಿ ಸಿ.ಎಚ್.ಲೋಕೇಶ್, ಮುಖ್ಯ ಶಿಕ್ಷಕಿ ದೀಪ ಎಂ.ಎನ್. ಮತ್ತು ಅಸ್ಮ, ಶಾಲಾ ಶಿಕ್ಷಕರು, ಸಿಬ್ಬಂದಿ, ಪೋಷಕರು, ಮಕ್ಕಳು ಹಾಜರಿದ್ದರು.