ಸಾಮಾಜಿಕ ಪಿಡುಗಿಗೆ ಶಿಕ್ಷಣ ಜಾಗೃತಿಯೇ ಮದ್ದು

| Published : Feb 10 2025, 01:49 AM IST

ಸಾರಾಂಶ

ಶಿಕ್ಷಣ ಹಾಗೂ ಜಾಗೃತಿಯಿಂದ ಮಾತ್ರ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಯುವ ಜನಾಂಗ ಎಚ್ಚೆತ್ತುಕೊಂಡು ಸಮಾಜದ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಬೇಕೆಂದು ಬದುಕು ಸಂಸ್ಥೆ ಮತ್ತು ಸಾಂತ್ವನ ಕೇಂದ್ರದ ನಿರ್ದೇಶಕ ಬಿ.ಎಸ್. ನಂದಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಶಿಕ್ಷಣ ಹಾಗೂ ಜಾಗೃತಿಯಿಂದ ಮಾತ್ರ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ಯುವ ಜನಾಂಗ ಎಚ್ಚೆತ್ತುಕೊಂಡು ಸಮಾಜದ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಬೇಕೆಂದು ಬದುಕು ಸಂಸ್ಥೆ ಮತ್ತು ಸಾಂತ್ವನ ಕೇಂದ್ರದ ನಿರ್ದೇಶಕ ಬಿ.ಎಸ್. ನಂದಕುಮಾರ್ ತಿಳಿಸಿದರು.

ನಗರದ ಹಳೇಪಾಳ್ಯದ ಸರ್ಕಾರಿ ಪ್ರೌಢಶಾಲೆ ಪಾಠಶಾಲೆಯಲ್ಲಿ ಸಾಂತ್ವನ ಕೇಂದ್ರದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಕ್ಕಳಿಗೆ ಬಾಲ್ಯ ವಿವಾಹ, ಪೋಕ್ಸೋ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಾಲ್ಯ ವಿವಾಹ ಒಂದು ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಇದು ನಿರ್ಮೂಲನೆಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರ ಬದುಕನ್ನು ಹಸನುಗೊಳಿಸಬೇಕು. ಇಂದಿನ ಸಮಾಜದಲ್ಲಿ ತಂತ್ರಜ್ಞಾನಗಳು ಮುಂದುವರೆದಂತೆ ಜೀವನ ಶೈಲಿಗಳೇ ಬದಲಾಗಿ ಅನವಶ್ಯಕವಾದ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ಸುಂದರ ಬದುಕನ್ನು ಹಾಳು ಮಾಡಿಕೊಳ್ಳುವಂತಾಗಿರುವುದು ಬೇಸರದ ಸಂಗತಿ. ಶಿಕ್ಷಣದಿಂದ ಸಮಾಜದ ಉನ್ನತಿ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಜ್ಞಾನ, ನಡೆ-ನುಡಿ, ಗುರು-ಹಿರಿಯರಿಗೆ ಗೌರವ, ಶಿಸ್ತು, ಪ್ರಾಮಾಣಿಕತೆಯನ್ನು ಕಲಿಸುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಮಾಡಬೇಕು. ತಂದೆ-ತಾಯಿಗಳು ನಿಮ್ಮನ್ನು ಕಷ್ಟಪಟ್ಟು ಶಾಲೆಗೆ ಕಳುಹಿಸುತ್ತಾರೆ. ಅವರ ಕಷ್ಟಗಳನ್ನು ಅರಿತು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ಸಂತೋಷದ ಜೊತೆಗೆ ಸಾಧನೆಯ ಸಂಕಲ್ಪ ಮಾಡಬೇಕೆಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಂರಕ್ಷಣಾಧಿಕಾರಿ ದೀಪಾ ಮಾತನಾಡಿ, ಮಕ್ಕಳು ಚಂಚಲ ಮನಸ್ಸು, ಆಕರ್ಷಣೆ, ಚಟಗಳಿಗೆ ಬಲಿಯಾಗಿ ಕೆಟ್ಟ ಮನಸ್ಸಿನಿಂದ ಹಾದಿ ತಪ್ಪುತ್ತಿರುವುದು ಬಹಳ ಅಪಾಯಕಾರಿ. ತಂದೆ-ತಾಯಿಗಳ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಗುರಿಯೊಂದಿಗೆ ಮುನ್ನಡೆದು, ಮೌಲ್ಯಾಧಾರಿದ ಶಿಕ್ಷಣದಿಂದ ಸದ್ಗುಣಿಗಳಾಗಬೇಕು. ಓದುವ ವಯಸ್ಸಿನಲ್ಲಿ ಮೊಬೈಲ್, ವಾಟ್ಸಾಪ್ ಬಳಸದೆ ಓದಿನತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವೆ ಸಂಕಟ ಅನುಭವಿಸುವಂತಾಗುತ್ತದೆ ಎಂದು ಕಿವಿ ಮಾತು ಹೇಳಿದ ಅವರು ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು. ಮುಖ್ಯಶಿಕ್ಷಕರಾದ ತೇಜಸ್ವಿ ಮಾತನಾಡಿ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಬೇಕಾದರೆ ಕನಿಷ್ಠ ಕಾನೂನಿನ ಅರಿವು ಅಗತ್ಯವಾಗಿದ್ದು ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳಿಗೆ ಸಾಮಾಜಿಕ ಅರಿವು ಮೂಡಿಸುವುದರಿಂದ ಮುಂದೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಲೀಲಾಬಾಯಿ, ಶಿಕ್ಷಕರಾದ ಮಂಜುಳಾ, ಗೌರಮ್ಮ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ, ಸಖಿ ಕೇಂದ್ರ ರಶ್ಮಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು, ಸಹ ಶಿಕ್ಷಕರುಗಳು ಭಾಗವಹಿಸಿದ್ದರು.