ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿಕ್ಷಣ ಪಡೆದವರು ಪ್ರತಿಯೊಂದನ್ನು ಪ್ರಶ್ನಿಸಿ ತಿಳಿದುಕೊಳ್ಳುವ ಮನೋಭಾವನೆಯನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರುಜಿಲ್ಲಾ ಪ್ರಜಾಸೌಧದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಲೋಕ ಶಿಕ್ಷಣ ಇಲಾಖೆ, ಹಾಗೂ ವಿಶ್ವವಿದ್ಯಾಲಯ ಶಿಕ್ಷಣ ಮಹಾವಿದ್ಯಾಲಯ ರವರ ಸಂಯುಕ್ತ ಆಶ್ರಯದಲ್ಲಿ ಗುರವಾರ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕುಜಿಲ್ಲೆಯ ಖ್ಯಾತ ಶಿಕ್ಷಣ ತಜ್ಞ ಹಾಗೂ ಗಾಂಧಿವಾದಿ ಡಾ.ಎಚ್.ನರಸಿಂಹಯ್ಯ ಅವರು ‘ಪ್ರಶ್ನಿಸದೆ ಏನನ್ನು ಒಪ್ಪಬೇಡಿ’ ಎಂದು ಹೇಳುತ್ತಿದ್ದರು. ಪ್ರಶ್ನಿಸಿದರೆ ಸರಿ ಯಾವುದು ತಪ್ಪು ಯಾವುದು ಎಂದು ತಿಳಿಯುತ್ತದೆ. ಶಿಕ್ಷಣ ಪಡೆದವರೇ ಪ್ರಶ್ನಿಸುವ, ಚರ್ಚಿಸುವ ಮನುಭಾವವನ್ನು ಹೆಚ್ಚಾಗಿ ಹೊಂದಿರುತ್ತಾರೆ. ಆದ್ದರಿಂದ ಜಿಲ್ಲೆಯ್ಲಲಿನ ಸಾಕ್ಷರತೆ ಪ್ರಮಾಣವನ್ನು ಉತ್ತಮ ಪಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ 15 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದ ಜಿಲ್ಲೆಯ ಅನಕ್ಷರಸ್ಥರಿಗೆ ಮೂಲ ಶಿಕ್ಷಣ ದೊರೆಯುವಂತಹ ವಾತಾವರಣ ಸೃಷ್ಟಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ 2024-25 ನೇ ಸಾಲಿನಲ್ಲಿ 5,790 ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ಮಾಡಲಾಗಿದೆ ಎಂದರು.
2011 ರ ಜನಗಣತಿ ಪ್ರಕಾರ ದೇಶದಲ್ಲಿ ಶೇ. 74.40, ರಾಜ್ಯದಲ್ಲಿ ಶೇ. 75.36 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ. 69.76 ರಷ್ಟು ಸಾಕ್ಷರತೆ ಪ್ರಮಾಣವಿದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2030 ರ ಒಳಗಾಗಿ ಶೇಕಡ ನೂರರಷ್ಟು ಸಾಕ್ಷರತೆಯನ್ನು ಜಿಲ್ಲೆಯಲ್ಲಿ ಸಾಧಿಸುವ ನಿಟ್ಟಿನಲ್ಲಿ ಯೋಜಿಸಿ ಕೆಲಸ ಮಾಡುವಂತೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.ಜಿಪಂ ಸಿಇಒ ಡಾ. ವೈ.ನವೀನ್ ಭಟ್ ಮಾತನಾಡಿ, ಜಿಲ್ಲೆಯು ಜ್ಞಾನವಂತರಿಗೆ ಖ್ಯಾತಿ ಪಡೆದಿದೆ. ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್.ಆರ್ ರಾವ್ ಮತ್ತು ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ರವರ ಜನ್ಮ ಭೂಮಿಯಾಗಿದೆ. ಇಂತಹ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತೆ ಜಿಲ್ಲೆಯನ್ನಾಗಿಸಲು ನಾವೆಲ್ಲರೂ ಶ್ರಮಿಸಬೇಕಿದೆ. ಅನಕ್ಷರಸ್ಥರನ್ನು ನವ ಸಾಕ್ಷರನ್ನಾಗಿಸುವ ಜೊತೆಗೆ ನವ ಸಾಕ್ಷರರಲ್ಲಿ ಶೇ 1 ರಷ್ಟು ಜನರನ್ನು ಕನಿಷ್ಠ 10ನೇ ತರಗತಿಯ ಪರೀಕ್ಷೆಯನ್ನು ಬರೆಯುವಂತೆ ಪ್ರೇರೇಪಿಸಬೇಕು. ಆಗ ಜಿಲ್ಲೆಗೆ ಹಿರಿಮೆ ಬರುತ್ತದೆ ಎಂದರು. ಸಾಕ್ಷರತಾ ದಿನಾಚಣೆಯ ಅವರು ಪ್ರತಿಜ್ಞಾವಿಧಿನ್ನು ಬೋಧಿಸಿದರು.ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲರಾದ ಮುನಿಕೆಂಪೇಗೌಡ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆಂಜನೇಯ, 6 ತಾಲೂಕಿಗಳ ಕ್ಷೇತ್ರ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಸ್ವಯಂಸೇವಕ ಬೋಧಕರು ಹಾಗೂ ನವ ಸಾಕ್ಷರರು ಇದ್ದರು.