ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಶಕ್ತಿ ಶಿಕ್ಷಣಕ್ಕಿದೆ: ಮಾಜಿ ಎಂಎಲ್‌ಸಿ ಕೆಟಿಎಸ್

| Published : Jan 29 2025, 01:30 AM IST

ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಶಕ್ತಿ ಶಿಕ್ಷಣಕ್ಕಿದೆ: ಮಾಜಿ ಎಂಎಲ್‌ಸಿ ಕೆಟಿಎಸ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅವಕಾಶಗಳ ಬಾಗಿಲು ವಿಶಾಲವಾಗಿ ತೆರೆದುಕೊಂಡಿವೆ. ಅದಕ್ಕಾಗಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜ್ಞಾನ ಸಂಪಾದಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ಸು ಕಾಣಬೇಕು. ಹಾಗೆಯೇ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಂಡಾಗ ನಿಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡುವ ಹಾಗೂ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವ ಶಕ್ತಿ ಶಿಕ್ಷಣಕ್ಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ತಾಲೂಕಿನ ಮುದಂಗದೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿದ್ದಿ ಚನ್ನೇಗೌಡ ಅವರ ಎಂಟನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅವಕಾಶಗಳ ಬಾಗಿಲು ವಿಶಾಲವಾಗಿ ತೆರೆದುಕೊಂಡಿವೆ. ಅದಕ್ಕಾಗಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜ್ಞಾನ ಸಂಪಾದಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ಸು ಕಾಣಬೇಕು. ಹಾಗೆಯೇ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಂಡಾಗ ನಿಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದರು.

ಸರ್ಕಾರಿ ಶಾಲೆಯಲ್ಲಿ ಸಿದ್ದಿ ಚನ್ನಪ್ಪನವರ ಹೆಸರಿನಲ್ಲಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸವನ್ನು ಅವರ ಕುಟುಂಬ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಆರ್ಥಿಕ ಶಕ್ತಿ ನೀಡಿ ಅವರನ್ನು ಶಿಕ್ಷಣವಂತರನ್ನಾಗಿ ಮಾಡುತ್ತಿರುವುದು ಮಾದರಿ ಕೆಲಸ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ಸಿದ್ದಿಚನ್ನಪ್ಪನವರು ಶೇ.೬೦ ಭಾಗ ಬಡಜನರ ಕೆಲಸಗಳಿಗೆ ಅವರ ಜೀವನವನ್ನು ಮೀಸಲಿಟ್ಟಿದ್ದವರು, ಪಂಚಾಯ್ತಿ ವ್ಯಾಪ್ತಿಯಲ್ಲಿ ಎಸ್‌ಬಿಐ ರಾಷ್ಟ್ರೀಕೃತ ಬ್ಯಾಂಕ್ ಪ್ರಾರಂಭಿಸಬೇಕು ಎನ್ನುವುದು ಚನ್ನಪ್ಪನವರ ಕನಸಾಗಿತ್ತು. ಈಗ ಪ್ರಾರಂಭವಾಗುತ್ತಿದೆ. ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಉದ್ಘಾಟನೆ ಗೊಳ್ಳುತ್ತಿದೆ. ಈ ಭಾಗದ ಜನರು ಬ್ಯಾಂಕಿನಲ್ಲಿ ಖಾತೆ ಓಪನ್ ಮಾಡಿ ಬ್ಯಾಂಕನ್ನು ಇಲ್ಲೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮನ್ ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದ್ರಾಕ್ಷಾಯಿಣಿ, ಉಪನ್ಯಾಸಕ ಮನುಗೊರವಾಲೆ, ಕಾಳೇನಹಳ್ಳಿ ತಿಮ್ಮೇಗೌಡ, ಮುಖ್ಯ ಶಿಕ್ಷಕ ಶಿವಾನಂದ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಚಿಕ್ಕಹೊನ್ನೇಗೌಡ, ದಕ್ಷಿಣ ಮೂರ್ತಿ, ಸುಧಾಕರ್, ಜೋಗಿಗೌಡ, ಗ್ರಾಮ ಪಂಚಾಯ್ತಿ ಸದಸ್ಯರಾದ ಸುಜಾತ, ಅನಿತಾ, ಸಿದ್ದಿಚನ್ನಪ್ಪ ರವರ ಪುತ್ರರಾದ ಆನಂದ್, ಸುರೇಶ್ ಇತರರು ಹಾಜರಿದ್ದರು.