ಶಿಕ್ಷಣಕ್ಕಿದೆ ವ್ಯಕ್ತಿಯ ಭವಿಷ್ಯ ರೂಪಿಸುವ ಶಕ್ತಿ: ಡಾ.ಬಿ.ಇ.ರಂಗಸ್ವಾಮಿ

| Published : Aug 11 2025, 01:40 AM IST / Updated: Aug 11 2025, 01:41 AM IST

ಶಿಕ್ಷಣಕ್ಕಿದೆ ವ್ಯಕ್ತಿಯ ಭವಿಷ್ಯ ರೂಪಿಸುವ ಶಕ್ತಿ: ಡಾ.ಬಿ.ಇ.ರಂಗಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಣಾಜೆ ನಡುಪದವಿನ ಪಿ.ಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಶಿಕ್ಷಣ ಮತ್ತು ಭವಿಷ್ಯ ಇವೆರಡರ ನಡುವೆ ಸಂಬಂಧವಿದೆ. ಶಿಕ್ಷಣಕ್ಕೆ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ. ಶಿಕ್ಷಣವು ನಮ್ಮ ಪದವಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿರಲಿ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಇ.ರಂಗಸ್ವಾಮಿ ಹೇಳಿದರು.

ಅವರು ಕೊಣಾಜೆ ನಡುಪದವಿನ ಪಿ.ಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಣ್ಣೂರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರಹಿಮಾನ್ ಮಾತನಾಡಿ, ಜೀವನದಲ್ಲಿ ಯಶಸ್ಸು ಅಷ್ಟೊಂದು ಸುಲಭದ ಮಾತಲ್ಲ. ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಕಂಡುಕೊಳ್ಳಬಹುದು ಎಂದರು.

ದುಬೈಯ ಸಿರಾಜ್ ಹೋಲ್ಡಿಂಗ್ ಇಂಟರ್‌ನ್ಯಾಶನಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಖಾದಿರ್ ಪೀರ್ ಷರೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜೀವನದಲ್ಲಿ ಏರಿಳಿತಗಳು ಸಹಜವಾಗಿರುತ್ತದೆ. ಅದು ಏನೇ ಇದ್ದರೂ ಮೊದಲಿಗೆ ನಮ್ಮ ಜೀವನವನ್ನು ಹಾಗೂ ನಮ್ಮ ಗೆಲುವನ್ನು ಪ್ರತಿಕ್ಷಣ ಸಂಭ್ರಮಿಸುವ ಮನೋಭಾವ ಬೆಳೆಯಬೇಕು. ಜೀವನದಲ್ಲಿ ನೀವು ಏನೇ ಸಾಧಿಸಿದರೂ ಅದು ನಿಮ್ಮ ಹೆತ್ತವರಿಗೆ ಸಲ್ಲಿಸುವ ದೊಡ್ಡ ಗೌರವಾಗಿರುತ್ತದೆ‌‌ ಎಂದರು.

ಪಿ.ಎ‌. ಶಿಕ್ಷಣ‌ ಸಂಸ್ಥೆಯ ಮ್ಯಾನೇಂಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿ, ಪಿ‌ಎ ಶಿಕ್ಷಣ ಸಂಸ್ಥೆಯು ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿ ಮುನ್ನಡೆಯುತ್ತಿದೆ ಎಂದರು.

ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ಪದವಿ ಪ್ರಮಾಣ ಬೋಧಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭ ಟ್ರಸ್ಟಿ ಅಬ್ದುಲ್ ಲತೀಫ್‌, ಹಣಕಾಸು‌ ನಿರ್ದೇಶಕ ಅಹ್ಮದ್ ಕುಟ್ಟಿ, ಕ್ಯಾಂಪಸ್ ಎಜಿಎಂ ಡಾ.ಶರ್ಪುದ್ದೀನ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಶೈಕ್ಷಣಿಕ ಸಾಧನಾ ಪುರಸ್ಕಾರ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಡಾ.ಸಯ್ಯದ್ ಅಮೀನ್ ಅಹಮ್ಮದ್ ಪರಿಚಯಿಸಿದರು.

ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಸಿಸಿಎ ಸಂಯೋಜಕ ಇಸ್ಮಾಯಿಲ್ ಶಾಫಿ ಎ.ಎಂ. ಸ್ವಾಗತಿಸಿದರು. ಪಿ.ಎ‌.ಕಾಲೇಜಿನ ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ವಂದಿಸಿದರು. ಪ್ರೊ.ಫಾತಿಮತ್ ರೈಹಾನ್ ಹಾಗೂ ಡಾ.ಶಬಾಝ್ ಕಾರ್ಯಕ್ರಮ ನಿರೂಪಿಸಿದರು.