ಕೇವಲ ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯವಿಲ್ಲ. ಯುವಜನರ ಶಿಕ್ಷಣ, ಸಾಮರ್ಥ್ಯ ಮತ್ತು ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೇವಲ ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯವಿಲ್ಲ. ಯುವಜನರ ಶಿಕ್ಷಣ, ಸಾಮರ್ಥ್ಯ ಮತ್ತು ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ನಗರದ ಪ್ರತಿಷ್ಠಿತ ಡಿವಿಎಸ್ ಶಿಕ್ಷಣ ಸಂಸ್ಥೆಯಿಂದ ನಡೆಯುತ್ತಿರುವ ಡಿವಿಎಸ್ ಹಬ್ಬದ ಮೊದಲ ದಿನ ಸಂಜೆ ನಡೆದ ಡಿವಿಎಸ್ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಹಿರಿಯರು ಕಟ್ಟಿದ ಡಿವಿಎಸ್ ಸಂಸ್ಥೆ ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದೆ. ಜಿಲ್ಲೆ ಮತ್ತು ರಾಜ್ಯಕ್ಕೆ ಗೌರವ ತಂದುಕೊಟ್ಟಿರುವ ಈ ಸಂಸ್ಥೆ ಶೈಕ್ಷಣಿಕ ಬದುಕಿನ ಮೈಲಿಗಲ್ಲಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳ ನಿರ್ಮಾಣವೂ ದೇಶಪ್ರೇಮದ ಒಂದು ರೂಪ ಎಂದರು.
ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದನ್ನು ನನಸಾಗಿಸಲು ನಿರಂತರ ಪ್ರಯತ್ನಿಸಬೇಕು. ಉನ್ನತ ಸ್ಥಾನಮಾನ ಪಡೆಯುವ ಉದ್ದೇಶದಿಂದ ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕಿರೀಟ ರಾಜನಿಗೆ ಮುಖ್ಯವಲ್ಲ; ಆತನ ಮೆದುಳಿನ ಶಕ್ತಿಯೇ ನಿಜವಾದ ಸಾಮಥ್ರ್ಯ. ಯುವಜನರನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.ದೇಶೀಯ ವಿದ್ಯಾಶಾಲೆಯ ಕೊಡುಗೆಯನ್ನು ಸ್ಮರಿಸಿದ ಸಚಿವರು, ಉತ್ತಮ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಮಾತನಾಡಿದರು.
ಡಿವಿಎಸ್ ಸಂಸ್ಥೆ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದೆ. ಜಾತಿ-ಮತಗಳ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಒದಗಿಸುವ ಮೂಲಕ ಸೇವಾ ಮನೋಭಾವ ಮೆರೆದಿದೆ. ವ್ಯಕ್ತಿತ್ವ ರೂಪಿಸುವಲ್ಲಿ ಈ ಸಂಸ್ಥೆಯ ಪಾತ್ರ ದೊಡ್ಡದಾಗಿದೆ ಎಂದರು.ಪ್ರತಿಷ್ಠೆಗಾಗಿ ಶಿಕ್ಷಣ ಪಡೆಯುವುದಕ್ಕಿಂತ ಬದುಕು ರೂಪಿಸಿಕೊಳ್ಳಲು ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಲು ಶಿಕ್ಷಣ ಅತ್ಯಗತ್ಯ. ದೇಶ ಬಲಿಷ್ಠವಾಗಿ ಬೆಳೆಯಬೇಕಾದರೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಡಿವಿಎಸ್ ಸಂಸ್ಥೆಯ ಅಮೃತ ಮಹೋತ್ಸವ ಸಂಭ್ರಮ ಸಂತೋಷ ತಂದಿದೆ. ಶಿಕ್ಷಣದ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಪರಿಪೂರ್ಣ ಶಿಕ್ಷಣ ದೊರೆಯುವಂತಾಗಬೇಕು ಎಂದು ಆಶಿಸಿದರು.ನಾನು ಇದೇ ಶಿಕ್ಷಣ ಸಂಸ್ಥೆಯಲ್ಲಿ ಓದಿರುವುದು ನನ್ನ ಸೌಭಾಗ್ಯ. ಈ ಶಾಲೆ ನನ್ನ ಬದುಕನ್ನು ರೂಪಿಸಿದೆ. ಬದುಕಿನಲ್ಲಿ ಸಾಧನೆ ಮಾಡಲು ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ಶಿಕ್ಷಣವೇ ನಿಜವಾದ ಕ್ರಾಂತಿ. ಸಮಾಜದ ಕಾಳಜಿ ಮತ್ತು ಸೇವಾ ಮನೋಭಾವ ಪ್ರತಿಯೊಂದು ವಿದ್ಯಾಸಂಸ್ಥೆಯ ಮೂಲ ಗುರಿಯಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ವರ್ಚುವಲ್ ಮೂಲಕ ವಿನೋಬನಗರ ಡಿವಿಎಸ್ ಪ್ರೌಢಶಾಲೆಗೆ ''''''''ಕಡಿದಾಳ್ ಮಂಜಪ್ಪ ಸ್ಮಾರಕ ಪ್ರೌಢಶಾಲೆ'''''''' ಎಂದು ನಾಮಕರಣದ ಹೆಸರು ಘೋಷಣೆ ಮಾಡಿದರು.ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ದಿನೇಶ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಕೆ. ಬಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ.ಎಸ್. ಅರುಣ್, ಬಲ್ಕೀಶ್ ಭಾನು, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್ , ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೀಶ್, ಸಂಸ್ಥೆಯ ಮಾಜಿ ಅಧ್ಯಕ್ಷ ಕೊಳಲೆ ರುದ್ರಪ್ಪ ಗೌಡ, ಪದಾಧಿಕಾರಿಗಳಾದ ಡಾ. ಸತೀಶ್ ಕುಮಾರ್ ಶೆಟ್ಟಿ, ಬಿ. ಗೋಪಿನಾಥ್, ದತ್ತಮೂರ್ತಿ ಭಟ್, ಪ್ರಾಂಶುಪಾಲರಾದ ಎನ್.ಕುಮಾರಸ್ವಾಮಿ, ಕುಲಸಚಿವ ಪ್ರೊ.ವೆಂಕಟೇಶ್ ಇದ್ದರು.