ವಿದ್ಯೆ ಬ್ರಾಹ್ಮಣರಿಗೆ ನಿಜವಾದ ಆಸ್ತಿ : ಡಾ. ಹರೀಶ್

| Published : Sep 04 2025, 01:00 AM IST

ಸಾರಾಂಶ

ಬ್ರಾಹ್ಮಣ ಸಮುದಾಯದವರು ಆರ್ಥಿಕವಾಗಿ ಬಡವರಾಗಿರಬಹುದು ಆದರೆ ವಿದ್ಯಾಶಕ್ತಿಯ ಸಂಪಾದನೆಯ ಮೂಲಕ ಗೌರವದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ವಿದ್ಯೆ ಬ್ರಾಹ್ಮಣರಿಗೆ ನಿಜವಾದ ಆಸ್ತಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ತುಮಕೂರು ಜಿಲ್ಲಾ ಪ್ರತಿನಿಧಿ ಡಾ. ಹರೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಬ್ರಾಹ್ಮಣ ಸಮುದಾಯದವರು ಆರ್ಥಿಕವಾಗಿ ಬಡವರಾಗಿರಬಹುದು ಆದರೆ ವಿದ್ಯಾಶಕ್ತಿಯ ಸಂಪಾದನೆಯ ಮೂಲಕ ಗೌರವದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ವಿದ್ಯೆ ಬ್ರಾಹ್ಮಣರಿಗೆ ನಿಜವಾದ ಆಸ್ತಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ತುಮಕೂರು ಜಿಲ್ಲಾ ಪ್ರತಿನಿಧಿ ಡಾ. ಹರೀಶ್ ತಿಳಿಸಿದರು. ನಗರದ ಶಂಕರಮಠದಲ್ಲಿ ತಾಲೂಕು ಬ್ರಾಹ್ಮಣ ಗೆಳೆಯರ ಬಳಗದ ವತಿಯಿಂದ ದಿವಂಗತ ಕೆ.ಆರ್. ವೆಂಕಟೇಶ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ವೇ ಜನ ಸುಖಿನೋ ಭವಂತು, ಸಮಸ್ತ ಸನ್ಮಾಂಗಲಾನಿ ಭವಂತು ಎಂಬ ಧ್ಯೇಯವನ್ನು ಅಳವಡಿಸಿಕೊಂಡಿರುವುದು ಬ್ರಾಹ್ಮಣ ಸಮುದಾಯದ ಶ್ರೇ?ತೆ ಎಂದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ಉಪಾಧ್ಯಕ್ಷ ಸುದರ್ಶನಂ ಮಾತನಾಡಿ ಸಮಾಜದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಸಮುದಾಯದ ಪ್ರತಿಯೊಬ್ಬರೂ ಪಡೆಯಬೇಕು. ಬಡ ವಿದ್ಯಾರ್ಥಿ ವಿದ್ಯಾರ್ಥಿನಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸಲು ಸಭೆ ಸಹಾಯ ಮಾಡುತ್ತಿದೆ ಎಂದರು. ತುಮಕೂರು ಜಿಲ್ಲಾ ಬ್ರಾಹ್ಮಣ ಸಭೆಯ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಅವರು, ವಿಪ್ರ ಸಮಾಜವು ಜೇನಗೂಡಿನಂತೆ ಸಹಕಾರ-ಸಹಬಾಳ್ವೆಯಿಂದ ಕಾರ್ಯನಿರ್ವಹಿಸಿದರೆ ತಾಲೂಕು ಮಟ್ಟದಿಂದಲೇ ಬಲಿಷ್ಠ ಸಮುದಾಯ ರೂಪಿಸಬಹುದು ಎಂದು ಕರೆ ನೀಡಿದರು. ಕುಮಾರ್ ಆಸ್ಪತ್ರೆ ವೈದ್ಯ ಡಾ. ಶ್ರೀಧರ್ ಮಾತನಾಡಿ, ಮುಂದಿನ ಪೀಳಿಗೆ ಉಳಿಯಬೇಕೆಂದರೆ ಹಿರಿಯರಾದ ನಾವು ಬ್ರಾಹ್ಮಣ್ಯವನ್ನು ಪಾಲಿಸಬೇಕು. ಸನಾತನ ಧರ್ಮ ಸಂಸ್ಕೃತಿ ಉಳಿದರೆ ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಖ್ಯಾತ ಗಾಯಕ ಶಶಿಧರ ಕೋಟೆ ತಮ್ಮ ಸುಮಧುರ ಕಂಠದಿಂದ ಸಭಿಕರನ್ನು ಮನರಂಜಿಸಿದರು. ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿ ಪಡೆದ ತಿಪಟೂರಿನ ಪ್ರಣವ್ ಬೆಳ್ಳೂರು, ಡಾಕ್ಟರೇಟ್ ಪದವಿ ಪಡೆದ ಮಹನೀಯರು ಹಾಗೂ ನಿಕಟ ಪೂರ್ವ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಗೆಳೆಯರ ಬಳಗದ ಅಧ್ಯಕ್ಷ ಬಿ.ಎಸ್. ಮೋಹನ್, ಪದಾಧಿಕಾರಿಗಳಾದ ಉಮಾಪ್ರಸಾದ್, ಎಚ್.ಎಸ್. ಚಂದ್ರಶೇಖರ್, ಶಶಿಧರ್, ಎಸ್.ಕೆ. ಅನಂತರಾಮು ಸೇರಿದಂತೆ ತಾಲೂಕಿನ ವಿವಿಧ ಸಂಘಗಳ ಅಧ್ಯಕ್ಷರು, ಬಳಗದ ಸದಸ್ಯರು ಸಮಾಜದ ಭಾಂದವರು ಭಾಗವಹಿಸಿದ್ದರು.