ಸಾರಾಂಶ
- ಭಾರತೀಯ ವಿದ್ಯಾಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ಆನಂದಕುಮಾರ್ ಅಭಿಮತ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅನ್ನ ಕೆಲ ಕ್ಷಣದ ಹಸಿವು ನೀಗಿಸುತ್ತದೆ. ಆದರೆ ಶಿಕ್ಷಣ ಜೀವಿತ ಕಾಲಪೂರ್ತಿ ಕೈ ಹಿಡಿದು ನಡೆಸುತ್ತದೆ ಎಂದು ಭಾರತೀಯ ವಿದ್ಯಾಸಂಸ್ಥೆ ಅಧ್ಯಕ್ಷ ಆನಂದ್ ಕುಮಾರ್ ಹೇಳಿದರು.ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸ್ಥೆ ತನ್ನ 39ನೇ ವರ್ಷಾಚರಣೆ ಆಚರಿಸುತ್ತಿದೆ. ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಇರಬೇಕು ಎಂಬ ಸದುದ್ದೇಶದಿಂದ ಮೂರು ದಶಕಗಳ ಹಿಂದೆಯೇ ಈ ಸಂಸ್ಥೆಯನ್ನು ಹಲವಾರು ಶಿಕ್ಷಣಾಸಕ್ತರು ಸೇರಿ ಹುಟ್ಟುಹಾಕಿದ್ದರು. ಇಂದು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಈ ಸಂಸ್ಥೆ ಕೇವಲ ಕಂಠಪಾಠ ಮಾಡುವ ವಿದ್ಯಾರ್ಥಿಗಳನ್ನು ಸೃಷ್ಠಿಸದೇ, ಶಿಕ್ಷಣದ ನೈಜ್ಯ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಇದೀಗ ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ಎಲ್ಲರೂ ಆಂತರ್ಜಾಲದಲ್ಲಿ ವೀಕ್ಷಿಸುವಂತೆ ವೆಬ್ ಸೈಟ್ ಕೂಡ ತೆರೆದಿದೆ ಎಂದರು.ಸಭೆ ಆರಂಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ್ದ ರವಿಕುಮಾರ್ ನಿಧನ ಪ್ರಯುಕ್ತ ಅವರ ಗೌರವಾರ್ಥ ಮೌನಾಚರಣೆ ಮಾಡಲಾಯಿತು. ಸಂಸ್ಥೆ ನೌಕರರ ಕಲ್ಯಾಣ ನಿಧಿಯಿಂದ ₹25 ಸಾವಿರ ಹಾಗೂ ನಿರ್ದೇಶಕರು ಸೇರಿ ನಿಧಿ ಸಂಗ್ರಹಿಸಿ ಮೃತರ ಕುಟುಂಬಕ್ಕೆ ನೀಡಿದರು.
ದಿವಂಗತ ರವಿಕುಮಾರ್ ಕುರಿತು ಕಾರ್ಯದರ್ಶಿ ಡಾ. ಎಚ್.ಪಿ. ರಾಜ್ ಕುಮಾರ್ ಸೇರಿದಂತೆ ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿಯವರು ಹಾಗೂ ನಿರ್ದೇಶಕರು ಮಾತನಾಡಿದರು.ಮಹಾಸಭೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್ ಕುಮಾರ್ ಸಂಸ್ಥೆಯ ವಾರ್ಷಿಕ ವರದಿಯನ್ನು ಸಮಗ್ರವಾಗಿ ಓದಿದರು. 2025-26 ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದನೆ ಪಡೆದು ಮಾತನಾಡಿ, ಪ್ರಸ್ತುತ ಸಂಸ್ಥೆಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ 641ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಾಠಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಸ್ಥೆ ಮಕ್ಕಳು ಸಾಧನೆಗಳನ್ನು ಮಾಡುತ್ತಿದ್ದಾರೆ ಎಂದರು.
ಖರ್ಚು- ವೆಚ್ಚಗಳ ವಿವರಗಳನ್ನು ಸಂಸ್ಥೆ ಖಜಾಂಚಿ ಸೋಮಶೇಖರ್ ಮಂಡಿಸಿದರು. ಸಂಸ್ಥೆಯ ಉಪಾಧ್ಯಕ್ಷ ಲಿಂಗಯ್ಯ, ಸಹ ಕಾರ್ಯದರ್ಶಿ ಗಣೇಶ್, ಹಾಲೇಶ್ ಕುಂಕೋದ್, ರೂಪ ಕರಿಸಿದ್ದಪ್ಪ, ಸಲಹಾ ಸಮಿತಿ ಸದಸ್ಯರು, ನಿರ್ದೇಶಕರು ಹಾಜರಿದ್ದರು.- - -
-31ಎಚ್.ಎಲ್.ಐ1.ಜೆಪಿಜಿ:ಮಹಾಸಭೆಯಲ್ಲಿ ಅಧ್ಯಕ್ಷ ಆನಂದ್ ಕುಮಾರ್ ಮಾತನಾಡಿದರು, ಕಾರ್ಯದರ್ಶಿ ಎಚ್.ಬಿ.ರಾಜ್ ಕುಮಾರ್ ಇತರರು ಇದ್ದರು.