ಪ್ರತಿಭೆ ಗುರುತಿಸಿ ಶಕ್ತಿ ಪರಿಚಯಿಸುವುದೇ ಶಿಕ್ಷಣ

| Published : Feb 03 2025, 12:31 AM IST

ಸಾರಾಂಶ

ಕುದೂರು: ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅವರ ಶಕ್ತಿಯ ಪರಿಚಯ ಮಾಡಿಕೊಡುವುದೇ ನಿಜವಾದ ಶಿಕ್ಷಣವಾಗಿದೆ ಎಂದು ಕಂಚುಗಲ್ ಬಂಡೇಮಠದ ಅಧ್ಯಕ್ಷ ಶ್ರೀಮಹಾಲಿಂಗ ಸ್ವಾಮೀಜಿ ಹೇಳಿದರು.

ಕುದೂರು: ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅವರ ಶಕ್ತಿಯ ಪರಿಚಯ ಮಾಡಿಕೊಡುವುದೇ ನಿಜವಾದ ಶಿಕ್ಷಣವಾಗಿದೆ ಎಂದು ಕಂಚುಗಲ್ ಬಂಡೇಮಠದ ಅಧ್ಯಕ್ಷ ಶ್ರೀಮಹಾಲಿಂಗ ಸ್ವಾಮೀಜಿ ಹೇಳಿದರು.

ಸೋಲೂರು ಹೋಬಳಿ ಕಂಚುಗಲ್ ಬಂಡೇಮಠದ ಶ್ರೀ ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ, ಶ್ರೀ ತೋಂಟದಾರ್‍ಯ ಸಂಸ್ಕೃತ ಶಾಲೆ, ಮತ್ತು ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಾನು ಓದಿದ ಶಾಲೆ ಮತ್ತು ಗ್ರಾಮವನ್ನು ಮರೆಯದೆ ತನಗೆ ಪಾಠ ಮಾಡಿದ ಶಿಕ್ಷಕ ವೃಂದವನ್ನು ಗೌರವದಿಂದ ನೆನೆಯುತ್ತಾ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಾಲೆಗೆ ಪಾಠೋಪಕರಣಗಳು ಮತ್ತು ಆಟೋಟ ಉಪಕರಣಗಳನ್ನು ನೀಡಿ ಗ್ರಾಮಾಂತರ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ಕೊಟ್ಟಿರುವುದು ಅಭಿನಂದಿಸಬೇಕಾದ ವಿಷಯ ಎಂದು ತಿಳಿಸಿದರು.

ಸಿದ್ದಗಂಗಾ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ವಿಶ್ವನಾಥ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಮಠ ಮಾಡಿರುವ ಸಾಧನೆಯನ್ನು ಇಡೀ ದೇಶವೇ ವಿಸ್ಮಯದಿಂದ ನೋಡುತ್ತಿದೆ. ಒಂದು ಜವಾಬ್ಧಾರಿಯುತ ಸರ್ಕಾರ ಮಾನವೀಯ ಕಳಕಳಿಯಿಂದ ಮಾಡುವ ಕೆಲಸವನ್ನು ಸಿದ್ದಗಂಗಾ ಮಠ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ತಂದೆ ತಾಯಿ ಮತ್ತು ಗುರು ಋಣವನ್ನು ಎಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಕಗ್ಗಲ್ಲನ್ನು ಕಡಿದು ಸುಂದರ ಮೂರ್ತಿಯನ್ನಾಗಿ ಮಾಡುವ ಗುರುವೃಂದ ನಮ್ಮಮ ಕಣ್ಣಿಗೆ ಕಾಣುವ ನಿಜವಾದ ದೇವತೆಗಳು, ನಮಗೆ ಬದುಕು ಕಟ್ಟಿಕೊಟ್ಟ ಶಾಲೆಗಳು ನಮ್ಮ ಪಾಲಿನ ಪವಿತ್ರ ದೇವಾಲಯವಾಗಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್‍ಯ ಡಾ.ಮುನಿರಾಜಪ್ಪ ಮಾತನಾಡಿ, ಹಳ್ಳಿಗಾಡಿನ ಜನರ, ರೈತಾಪಿ ವರ್ಗದವರಿಗೆ ಆಶಾಕಿರಣದಂತೆ ಶ್ರೀಮಠದ ಶಾಲೆಗಳು ವಿದ್ಯೆ ವಸತಿ ಮತ್ತು ಪ್ರಸಾದವನ್ನು ಉಚಿತವಾಗಿ ನೀಡುವುದರ ಜೊತೆಗೆ ಸಂಸ್ಕಾರದ ಪಾಠವನ್ನು ಅವರ ಬದುಕಿನ ಒಂದು ಮಾರ್ಗವನ್ನಾಗಿ ಮಾಡಿಕೊಳ್ಳಲು ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಗಂಗರಂಗಯ್ಯ, ಶಿವಕುಮಾರ್, ಲೋಕೇಶ್, ನೇತ್ರೇಶ್, ರೇಣುಕಾಪ್ರಸಾದ್, ಶಿವಚಿಕ್ಕನಹಳ್ಳಿ, ಜ್ಯೋತಿಬಾಬು, ಶಿವಪ್ರಸಾದ್, ಕೃಷ್ಣಾರೆಡ್ಡಿ, ಶಿಕ್ಷಕ ಶಿವಕುಮಾರಸ್ವಾಮಿ, ಗುರುಮೂರ್ತಿ, ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್‌..............

ಮಕ್ಕಳು ಶಿಕ್ಷಣದಷ್ಟೇ ನೌತಿಕ ಮೌಲ್ಯಗಳಿಗೂ ಆದ್ಯತೆ ನೀಡಬೇಕು. ಗುರು ಹಿರಿಯರನ್ನು ಹಾಗೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಗೌರವಿಸಬೇಕು. ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು. ಆಗಲೇ ನಾವು ಭೂಮಿ ಮೇಲೆ ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ.

-ಶ್ರೀಮಹಾಲಿಂಗ ಸ್ವಾಮೀಜಿ, ಅಧ್ಯಕ್ಷ, ಕಂಚುಗಲ್ ಬಂಡೇಮಠ

2ಕೆಆರ್ ಎಂಎನ್ 4.ಜೆಪಿಜಿ

ಸೋಲೂರು ಹೋಬಳಿ ಕಂಚುಗಲ್ ಬಂಡೇಮಠದಲ್ಲಿ ಶ್ರೀ ಸಿದ್ದಗಂಗಾ ಪ್ರೌಢಶಾಲೆ, ತೋಂಟದಾರ್‍ಯ ಸಾಲೆ, ಮಹಾಲಿಂಗೇಶ್ವರ ಶಾಲೆಯ ಶಾಲಾ ವಾರ್ಷಿಕೋತ್ಸವವನ್ನು ಶ್ರೀ ಮಹಾಲಿಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು.