1950ರಲ್ಲಿ ದೇಶದಲ್ಲಿ ಕೇವಲ 20 ರಿಂದ 22 ವಿಶ್ವವಿದ್ಯಾಲಯಗಳಿದ್ದವು. ಈಗ ಅವುಗಳ ಸಂಖ್ಯೆ 600 ದಾಟಿದೆ.

ಬಳ್ಳಾರಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ವಿವಿಧ ಭಾಷೆಗಳ ಅನುವಾದ ಹಾಗೂ ಅಗತ್ಯ ಮಾಹಿತಿ ಪಡೆಯಲು ಸಾಧ್ಯವಾಗುತ್ತಿದೆ. ಇದರಿಂದ ಭಾಷೆಯ ಅಡೆತಡೆ ಕ್ರಮೇಣ ಕಡಿಮೆಯಾಗಲಿವೆ. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಕಲಿತು,ಅದನ್ನು ತಮ್ಮ ಜ್ಞಾನಾರ್ಜನೆ ಹಾಗೂ ವೃತ್ತಿಜೀವನದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿಂದಿಗೇರಿ ಸಮೀಪದ ಕಿಷ್ಕಿಂದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

1950ರಲ್ಲಿ ದೇಶದಲ್ಲಿ ಕೇವಲ 20 ರಿಂದ 22 ವಿಶ್ವವಿದ್ಯಾಲಯಗಳಿದ್ದವು. ಈಗ ಅವುಗಳ ಸಂಖ್ಯೆ 600 ದಾಟಿದೆ. ಸರ್ಕಾರಿ ವಿಶ್ವವಿದ್ಯಾಲಯಗಳ ಜತೆಗೆ ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಬೆಂಗಳೂರು ಜಾಗತಿಕ ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ದೇಶದಲ್ಲಿ ಹಿಂದೆ ಶೇ. 18ರಷ್ಟಿದ್ದ ಸಾಕ್ಷರತಾ ಪ್ರಮಾಣ ಈಗ ಶೇ.80ರ ಮಟ್ಟಕ್ಕೆ ಏರಿಕೆಯಾಗಿದೆ. ಆದಾಗ್ಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕ್ಷರತಾ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಶಿಕ್ಷಣದಿಂದ ವಂಚಿತರಾಗಿರುವ ಸಮುದಾಯ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು ಎಂದು ತಿಳಿಸಿದರು.

ಸಂಶೋಧನೆಗೆ ಆದ್ಯತೆ ನೀಡಿ: ಘಟಿಕೋತ್ಸವವೆಂದರೆ ಕೇವಲ ಪದವಿ ಪ್ರಮಾಣಪತ್ರ ವಿತರಿಸುವ ಸಮಾರಂಭವಲ್ಲ. ವಿದ್ಯಾರ್ಥಿಗಳು ಗಳಿಸಿದ ಜ್ಞಾನ, ಕೌಶಲ ಮತ್ತು ಸಾಧನೆ ಸಂಭ್ರಮಿಸುವ ಸಂದರ್ಭವೂ ಹೌದು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನಸಂಖ್ಯೆ ಹೊಂದಿರುವ ದೇಶವಾಗಿದೆ. ಯುವಶಕ್ತಿ ಸಂಶೋಧನೆ, ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೆ ದೇಶ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲಿದೆ. ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದಕ್ಕೆ ಮಾತ್ರ ಶಿಕ್ಷಣ ಸೀಮಿತಗೊಳಿಸದೆ, ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು.

ಇಂಗ್ಲಿಷ್ ಭಾಷೆ ಕಲಿತರೆ ಮಾತ್ರ ಬುದ್ಧಿವಂತರು, ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬ ಮನೋಭಾವ ಹೆಚ್ಚುತ್ತಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಇಂತಹ ಭಾವನೆಯಿಂದ ಹೊರಬರಬೇಕು. ಜ್ಞಾನ ಸಂಪಾದನೆಗೆ ಮಾತೃಭಾಷೆಯೇ ಭದ್ರ ಬುನಾದಿ. ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಮಾತೃಭಾಷೆಯ ಬಗ್ಗೆ ಕೀಳರಿಮೆ ಹೊಂದಬಾರದು ಎಂದು ಸಚಿವರು ತಿಳಿಸಿದರು.

ಗಿರೀಶ್ ರಾಮಣ್ಣಗೆ ಗೌರವ ಡಾಕ್ಟರೇಟ್: ಬೆಂಗಳೂರಿನ ಟೆಸ್ಟ್ ಯಂತ್ರ ಸಾಫ್ಟ್‌ವೇರ್ ಸಲ್ಯೂಷನ್ಸ್, ಕ್ಯೂಸ್ಪೈಡರ್ಸ್, ಜೆಸ್ಪೈಡರ್ಸ್ ಹಾಗೂ ಫೈರ್‌ಫ್ಲಿಂಕ್ ಸಂಸ್ಥೆಗಳ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ರಾಮಣ್ಣ ಅವರಿಗೆ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇಸ್ರೊ ನ್ಯಾವಿಗೇಷನ್ ಸಿಸ್ಟಮ್ಸ್ ವಿಭಾಗದ ವಿಜ್ಞಾನಿ ಹಾಗೂ ಸಮೂಹ ನಿರ್ದೇಶಕಿ ಎಂ.ವಿ. ರೂಪ, ಮಾಜಿ ಸಚಿವ ಬಸವರಡ್ಡಿ ರಂಗರಡ್ಡಿ ಯಾವಗಲ್ ಮಾತನಾಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯಶವಂತ್ ಭೂಪಾಲ್ ಹಾಗೂ ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿ ಮತ್ತು ಸಾಧನೆ ವಿವರಿಸಿದರು.

ಟಿಇಎಚ್‌ಆರ್‌ಡಿ ಟ್ರಸ್ಟ್ ಸದಸ್ಯ ಎಸ್.ಬಿ. ಅಶೋಕ್ ಭೂಪಾಲ್, ಸಹ ಕುಲಾಧಿಪತಿ ವೈ.ಜೆ. ಪೃಥ್ವಿರಾಜ್, ಟ್ರಸ್ಟಿ ಅಮರ್‌ರಾಜ್ ಭೂಪಾಲ್, ಕುಲಸಚಿವ ಪ್ರೊ. ಯು.ಈರಣ್ಣ, ಮೌಲ್ಯಮಾಪನ ಕುಲಸಚಿವ ಪ್ರೊ. ರಾಜು ಜಾಡರ್ ಮತ್ತಿತರರು ಉಪಸ್ಥಿತರಿದ್ದರು.

155 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಬಿಸಿಎ ವಿಭಾಗದ 44, ಎಂಸಿಎ ವಿಭಾಗದ 42, ಎಂಬಿಎ ವಿಭಾಗದ 51 ಹಾಗೂ ಎಂಟೆಕ್ ವಿಭಾಗದ 18 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 155 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ದ್ವಿತೀಯ ರ‍್ಯಾಂಕ್ ಪಡೆದವರಿಗೆ ಬೆಳ್ಳಿ ಪದಕ ವಿತರಿಸಲಾಯಿತು. ಇದಕ್ಕೂ ಮುನ್ನ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಂಪ್ರದಾಯಿಕ ಘಟಿಕೋತ್ಸವ ಮೆರವಣಿಗೆ ನಡೆಯಿತು. ಶೈಕ್ಷಣಿಕ ಉಡುಪು ಧರಿಸಿದ್ದ ವಿಶ್ವವಿದ್ಯಾಲಯದ ಪದಾಧಿಕಾರಿಗಳು ಹಾಗೂ ಬೋಧಕ ವರ್ಗದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.