ಸಮುದಾಯ ಮುನ್ನಡೆಗೆ ಶಿಕ್ಷಣ ಅಗತ್ಯ

| Published : Jul 15 2024, 01:48 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿ ವತಿಯಿಂದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಿಎಚ್‌ಡಿ ಪದವಿ ಪಡೆದವರಿಗೆ ಅಭಿನಂದನಾ ಸಮಾರಂಭ ನಡೆಯಿತು.

ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿ ವತಿಯಿಂದ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಿಎಚ್‌ಡಿ ಪದವಿ ಪಡೆದವರಿಗೆ ಅಭಿನಂದನಾ ಸಮಾರಂಭ ನಡೆಯಿತು.

ನಗರಸಭಾ ಸದಸ್ಯ ಹಾಗೂ ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮಾತನಾಡಿ, ನೇಕಾರಿಕೆಯನ್ನು ಕುಲಕಸುಬಾಗಿಸಿಕೊಂಡಿರುವ ದೇವಾಂಗ ಸಮುದಾಯ ದಶಕಗಳ ಹಿಂದೆ ಶೈಕ್ಷಣಿಕವಾಗಿ ಹಿಂದುಳಿದಿತ್ತು. ಈ ದಿಸೆಯಲ್ಲಿ ಸಮುದಾಯದ ಹಿರಿಯರು ಮುಂದಾಲೋಚನೆಯಿಂದ ಶಿಕ್ಷಣದ ಮಹತ್ವ ಕುರಿತು ಹೇಳಿ, ಶಿಕ್ಷಣ ಸಮುದಾಯದ ಪ್ರಗತಿಗೆ ಅಸ್ತ್ರವಾಗಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದರು. ಶೈಕ್ಷಣಿಕ ನೆಲೆಗಟ್ಟಿನಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿ ಮುನ್ನಡೆಯುವುದರೊಂದಿಗೆ, ದೇವಾಂಗ ಸಮುದಾಯ ಮುನ್ನಡೆಯಬೇಕಿದೆ. ಇಂದಿನ ಪೀಳಿಗೆಗೆ ಶಕ್ತಿ ಸಾಮರ್ಥ್ಯವಿದೆ.ಆದರೆ ಸೀಮಿತವಾಗಿ ಬೇಲಿ ಹಾಕಿಕೊಂಡ ಕಾರಣ ಮುನ್ನಡೆಯಲು ಆಗುತ್ತಿಲ್ಲ. ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಹಿರಿಯರ ಕನಸನ್ನು ಸಾಕಾರಗೊಳಿಸಬೇಕು ಎಂದರು.

ಕಾರ್‍ಯಕ್ರಮದಲ್ಲಿ ಪಿಎಚ್‌ಡಿ ಪದವಿ ಪಡೆದ ಡಾ.ನಿರ್ಮಲ ಮೋಹನ್, ಡಾ.ಸುಪ್ರಿಯಾ.ಎಚ್.ಎಸ್, ಡಾ.ಎಂ.ಎಸ್.ರಾಮು ಹಾಗೂ ವಿವಿಧ ಪದವಿಗಳಲ್ಲಿ ರ್‍ಯಾಂಕ್ ಪಡೆದ ಡಾ.ಶ್ರೀನಿವಾಸ.ಎನ್.ವಿ, ಡಾ.ತೇಜಸ್ವಿನಿ.ಆರ್, ಡಾ.ವೈಷ್ಣವಿ.ಕೆ.ಜೆ.ಎನ್, ಹರ್ಷಿತ್.ಎಚ್.ಸಿ ಅವರನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ನಗರಸಭೆಗೆ ನಾಮನಿರ್ದೇಶಿತ ಸದಸ್ಯ ಅಖಿಲೇಶ್, ಮಜರಾಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನಾರಾಯಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಕಾರ್‍ಯಕ್ರಮದಲ್ಲಿ ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಪಿ.ಗೋಪಾಲ್, ಸಹ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಎಚ್.ವಿ.ಅಖಿಲೇಶ್ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.