ಸಾರಾಂಶ
ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಹೊಸಪೇಟೆ ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೊಸಪೇಟೆ: ಸಮಾಜದ ಸುಧಾರಣೆಗೆ ಶಿಕ್ಷಣವೇ ಮುಖ್ಯವಾಗಿದ್ದು, ಉನ್ನತ ಹುದ್ದೆ ಸೇರುವುದರಿಂದ ಒಂದು ಕುಟುಂಬ ಬೆಳೆಯುವ ಜತೆಗೆ ಸಮಾಜ ಕೂಡ ಬೆಳೆಯುತ್ತದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲು ನಾವು ಉನ್ನತ ಗುರಿ ಹೊಂದಬೇಕು. ಸತತ ಪ್ರಯತ್ನ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಉತ್ತಮ ಸಾಧನೆ ಮಾಡಿದರೆ ಸನ್ಮಾನ ಕೂಡ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ನಮ್ಮಲ್ಲಿ ಮೇಲು, ಕೀಳು ಎಂಬ ಭಾವನೆ ಇರಬಾರದು. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನದೇ ಆದಂತಹ ಕೌಶಲ್ಯ ಹೊಂದಿರುತ್ತಾನೆ. ಪ್ರತಿಭೆಯೇ ಮಾನದಂಡವಾಗಿದ್ದು, ನಾವು ಕೌಶಲ್ಯ ಬೆಳೆಸಿಕೊಂಡು ಮುನ್ನಡೆಯಬೇಕು ಎಂದರು.ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ ಅವರು ಸಂವಿಧಾನಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್. ಶೇಷು ಮಾತನಾಡಿ, ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ನಿರಂತರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುತ್ತದೆ. ಸಮಾಜದಲ್ಲಿ ಶಿಕ್ಷಣ ಎಂಬುದು ಬಹುಮುಖ್ಯವಾಗಿರುತ್ತದೆ. ಹಾಗಾಗಿ ನಾವು ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ ಎಂದರು.ಎ. ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಿಯ ಮಾತಂಗ ಪರ್ವತದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹುಡಾ ಅಧ್ಯಕ್ಷ ಎಚ್ಎನ್ಎಫ್ ಇಮಾಮ್ ನಿಯಾಜಿ, ನಗರಸಭೆ ಪೌರಾಯುಕ್ತ ಶಿವಕುಮಾರ್, ಡಾ. ಬಿ.ಆರ್. ಅಂಬೇಡ್ಕರ್ ಸಂಘ ಅಧ್ಯಕ್ಷ ಕೆ.ಪಿ. ಉಮಾಪತಿ, ಮುಖಂಡರಾದ ಎಂ.ಸಿ. ವೀರಸ್ವಾಮಿ, ಬಲ್ಲಾಹುಣಸಿ ರಾಮಣ್ಣ, ಸೋಮಶೇಖರ ಕಮಲಾಪುರ, ಪೂಜಪ್ಪ, ಕೆ. ಉಚ್ಚಂಗಪ್ಪ, ನಿಂಗಪ್ಪ, ಪಿ. ಸಂತೋಷಕುಮಾರ್, ಕೊಟ್ರೇಶ, ನಾಗಪ್ಪ, ಲಕ್ಷ್ಮಣ, ಶ್ರೀನಿವಾಸ, ಕರಿಯಪ್ಪ, ಹನುಮಂತಪ್ಪ, ಪಂಪಾಪತಿ, ವಿಜಯಕುಮಾರ್, ರವಿ, ಸುಹೇಲ್ ಭರತ್ ಕುಮಾರ್ ಮತ್ತಿತರರಿದ್ದರು.