ದೇವದಾಸಿ ಪದ್ಧತಿ ನಿರ್ಮೂಲನೆಗೆ ಶಿಕ್ಷಣ ಅಗತ್ಯ: ನ್ಯಾಯಾಧೀಶ ಮಾಹಂತೇಶ ದರಗದ

| Published : Mar 07 2025, 11:47 PM IST

ದೇವದಾಸಿ ಪದ್ಧತಿ ನಿರ್ಮೂಲನೆಗೆ ಶಿಕ್ಷಣ ಅಗತ್ಯ: ನ್ಯಾಯಾಧೀಶ ಮಾಹಂತೇಶ ದರಗದ
Share this Article
  • FB
  • TW
  • Linkdin
  • Email

ಸಾರಾಂಶ

ದೇವದಾಸಿಯರು ಸಂಕಟ ಮುಚ್ಚಿಟ್ಟುಕೊಂಡು ಎಷ್ಟೇ ನೋವುಗಳಿದ್ದರೂ ಸಹಿತ ಖುಷಿಯಾಗಿ ಇರುತ್ತಾರೆ. ನಿಮಗೆ ಮುಖ್ಯವಾಗಿ ಬೇಕಿರುವುದು ಮಾನಸಿಕ ನೆಮ್ಮದಿ, ಸಮಾಜದಲ್ಲಿ ಗೌರವ. ಮುಂದಿನ ಪೀಳಿಗೆಯವರು ಈ ಪದ್ಧತಿಗೆ ಬಲಿಯಾಗದಿರಲು ಶಿಕ್ಷಣ ದೊರೆಯಬೇಕು.

ಕೊಪ್ಪಳ:

ದೇವದಾಸಿ ಪದ್ಧತಿ ನಿರ್ಮೂಲನೆಯಾಗಲು ಶಿಕ್ಷಣ ದೊಡ್ಡ ಅಸ್ತ್ರವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಾಗ ಈ ಪದ್ಧತಿಯನ್ನು ಬುಡಸಮೇತ ಕಿತ್ತು ಹಾಕಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾತೇಶ ದರಗದ ಹೇಳಿದರು.

ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಮತ್ತು ಗ್ರಾಮ ಪಂಚಾಯಿತಿ ಕವಲೂರು ಆಶ್ರಯದಲ್ಲಿ ಕವಲೂರು ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಾಜಿ ದೇವದಾಸಿಯರಿಗೆ ಏರ್ಪಡಿಸಿದ್ದ ಉಚಿತ ಕಾನೂನು ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇವದಾಸಿಯರು ಸಂಕಟ ಮುಚ್ಚಿಟ್ಟುಕೊಂಡು ಎಷ್ಟೇ ನೋವುಗಳಿದ್ದರೂ ಸಹಿತ ಖುಷಿಯಾಗಿ ಇರುತ್ತಾರೆ. ನಿಮಗೆ ಮುಖ್ಯವಾಗಿ ಬೇಕಿರುವುದು ಮಾನಸಿಕ ನೆಮ್ಮದಿ, ಸಮಾಜದಲ್ಲಿ ಗೌರವ. ಮುಂದಿನ ಪೀಳಿಗೆಯವರು ಈ ಪದ್ಧತಿಗೆ ಬಲಿಯಾಗದಿರಲು ಶಿಕ್ಷಣ ದೊರೆಯಬೇಕು. ಯಾರಾದರೂ ದೇವದಾಸಿ ಪದ್ಧತಿಗೆ ಬಿಟ್ಟಿದ್ದೆಯಾದರೆ ಕಾನೂನಿನಡಿ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದರು.ರವಿಚಂದ್ರ ಮಾಟಲದಿನ್ನಿ, ದೇವದಾಸಿ ಸಮರ್ಪಣೆ ನಿಷೇಧ ಕಾಯ್ದೆ-1982 ಮತ್ತು ತಿದ್ಧುಪಡಿ ಅಧಿನಿಯಮ-2009ರ ಕುರಿತು ಉಪನ್ಯಾಸ ನೀಡಿ, ದೇವದಾಸಿ ಪದ್ಧತಿ ಅಂಟು ರೋಗ. ಇದನ್ನು ಈ ಹಿಂದೆ ಜಾರಿಗೆ ತಂದವರು ಯಾರೇ ಇರಲಿ, ಅವರು ಮನುಷ್ಯರೇ ಅಲ್ಲ ಎಂದು ಹೇಳಿದರು. ದೇವದಾಸಿ ಪದ್ಧತಿಗೆ ಬಿಟ್ಟರೆ ಕಾಯ್ದೆ ಕಲಂ 3ರಡಿ 3ರಿಂದ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಎಲ್ಲರು ಕಾನೂನಿನ ತಿಳಿವಳಿಕೆ ಪಡೆಯಬೇಕು ಎಂದರು.

ಕೊಪ್ಪಳ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ, ಮಾಜಿ ದೇವದಾಸಿಯರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರೆ, ಸಖಿ ಒನ್ ಸ್ಟಾಫ್‌ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೆಸ್ತರ್ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಉಪನ್ಯಾಸ ನೀಡಿದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೊಲೀಸ್‌ ಇಲಾಖೆಯ ಶಶಿಕಾಂತ, ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣ ಪೂಜಾರಿ, ಪಿಡಿಒ ಅನಿತಾ ಕಿಲ್ಲೇದ, ಯೋಜನಾ ಅನುಷ್ಠಾಧಿಕಾರಿ ರೇಣುಕಾ ಮಠದ, ಸ್ನೇಹಾ ಸಂಸ್ಥೆಯ ಶೋಭಾ ಮಠದ ಸೇರಿದಂತೆ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯೋಜನಾ ಅನುಷ್ಠಾಧಿಕಾರಿ ದಾದೇಸಾಬ್‌ ಹಿರೇಮನಿ ನಿರ್ವಹಿಸಿದರು.