ಸಾರಾಂಶ
ಮನುಷ್ಯನ ಪರಿಪೂರ್ಣತೆಗೆ ಶಿಕ್ಷಣವೇ ಮೂಲ ಬುನಾದಿಯಾಗಿದ್ದು, ಆಧುನಿಕ ಯುಗದಲ್ಲಿ ಪರಿಣಾಮಕಾರಿ ಶಿಕ್ಷಣಕ್ಕೆ ಮೂಲ ಮೌಲ್ಯಗಳನ್ನು ಅನುಸರಿಸಿಬೇಕು. ಆ ನಿಟ್ಟಿನಲ್ಲಿ ಸಂಘದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮನುಷ್ಯನ ಪರಿಪೂರ್ಣತೆಗೆ ಶಿಕ್ಷಣವೇ ಮೂಲ ಬುನಾದಿಯಾಗಿದ್ದು, ಆಧುನಿಕ ಯುಗದಲ್ಲಿ ಪರಿಣಾಮಕಾರಿ ಶಿಕ್ಷಣಕ್ಕೆ ಮೂಲ ಮೌಲ್ಯಗಳನ್ನು ಅನುಸರಿಸಿಬೇಕು. ಆ ನಿಟ್ಟಿನಲ್ಲಿ ಸಂಘದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ನೂತನ ಸಭಾಭವನದಲ್ಲಿ ನಡೆದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲಾ ಸಮೂಹದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಅವರು ಬದುಕು ಕಟ್ಟಿಕೊಳ್ಳುವಂತಹ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪರಿಣಾಮ ಇಂದು, ನಗರದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲಾ ಸಮೂಹದ ಇತರ ಶಾಖೆಗಳಾದ ಲೋಕಾಪುರ, ಮುಧೋಳ, ರಾಮದುರ್ಗ ಮತ್ತು ಬಿಡದಿ ಶಾಲೆಗಳು ನವದೆಹಲಿಯ ಕೇಂದ್ರೀಯ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿದ್ದು ಶ್ಲಾಘನೀಯ ಎಂದರು.
ಸಂಘದ ಶೈಕ್ಷಣಿಕ ಧ್ಯೇಯೋದ್ದೇಶಗಳನ್ನು ಈಡೇರಿಸುವಲ್ಲಿ ಮುಂಚೂಣಿಯಲ್ಲಿರುವ ಬಿಪ್ಸ್ ಶಾಲಾ ಸಮೂಹದ ಸಿಬ್ಬಂದಿ ವರ್ಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಚಾರ್ಯರಾದ ಸಿ.ಬಿ.ಸುರೇಶ್ ಹೆಗ್ಡೆ ಸೇರಿದಂತೆ ಸಾಧನೆಗೆ ಕಾರಣೀಕರ್ತರಾದ ಪ್ರತಿ ಶಾಲೆಯ ಪ್ರಾಚಾರ್ಯರು ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ವೃಂದಕ್ಕೆ ಅಭಿನಂದಿಸಿದರು.ವಿಸ್ತಾರ ಜಿಂದಗಿ ಸಂಸ್ಥಾಪಕರೂ ಜೀವನ ಕೌಶಲ್ಯ ತರಬೇತುದಾರರಾದ ಮಹೇಶ್ ಮಾಶಾಳ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಗೆಲುವನ್ನು ಸಂಭ್ರಮಿಸುವುದರ ಜೊತೆಗೆ ಸೋಲನ್ನು ಒಪ್ಪಿಕೊಳ್ಳುವ ಗುಣವನ್ನು ಸಹ ಕಲಿಸಬೇಕು. ಮಕ್ಕಳಿಗೆ ಮಾನವೀಯ ಮೌಲ್ಯಗಳು ಜೀವನದಲ್ಲಿ ಮುಖ್ಯ ಎಂಬುದನ್ನು ಹೇಳಿಕೊಡಬೇಕು ಎಂದರು.ಕಾರ್ಯಕ್ರಮದಲ್ಲಿ ಖ್ಯಾತ ತರಬೇತುದಾರರಾದ ದಿನೇಶ್ ನಾಯರ್ ಮತ್ತು ಲೋಕೇಶ್, ಶಿಕ್ಷಕರು ತರಗತಿ ಕೋಣೆಯಲ್ಲಿ ಮಕ್ಕಳನ್ನು ಯಾವ ರೀತಿ ತೊಡಗಿಸಬೇಕು. ತರಗತಿ ಕೋಣೆಯ ನಿರ್ವಹಿಸುವಿಕೆ, ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮಗಳ ವ್ಯತ್ಯಾಸ ಮತ್ತು ಅವುಗಳ ತಿಳುವಳಿಕೆಯ ಜೊತೆಗೆ ಪಾಠ ಯೋಜನೆ, ತಾಂತ್ರಿಕ ಬೋಧನೆ, ಸಂವಹನದ ಬಗೆಗೆ ಹಲವಾರು ಮಾಹಿತಿಗಳನ್ನು ನೆರೆದ ಎಲ್ಲ ಶಿಕ್ಷಕರಿಗೂ ತಿಳಿಸಿದರು.ಸಂಘದ ಶಾಲಾ ಆಡಳಿತ ಮಂಡಳಿ ಸಮಿತಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ್ ಹಾಗೂ ಪ್ರಾಚಾರ್ಯರಾದ ಸಿ ಬಿ ಸುರೇಶ್ ಹೆಗಡೆ ಮಾತನಾಡಿದರು. ಅಭಿನಂದನಾ ಸಮಾರಂಭದಲ್ಲಿ ನೂತನ ಸಿಬಿಎಸ್ಸಿ ಶಾಲೆಗಳು ಮಾನ್ಯತೆ ಪಡೆಯುವಲ್ಲಿ ಶ್ರಮಿಸಿದ ಸಿ.ಎಸ್.ಮಾಲಿ ಪಾಟೀಲ್ ಹಾಗೂ ಬಸವರಾಜ್ ಕಲಾದಗಿ ಅವರನ್ನು ಸನ್ಮಾನಿಸಲಾಯಿತು.ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಹಾಗೂ ಪಬ್ಲಿಕ್ ಶಾಲೆಯ ಉಪ ಪ್ರಾಚಾರ್ಯ ಮಂಗಳ ಗೌರಿ ಹೆಗ್ಡೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಶಿಕ್ಷಕಿ ಅಂಜುಮ್ ಸಿದ್ದಿಕ್ ಹಾಗೂ ಶಿಲ್ಪಾ ಕುಲಕರ್ಣಿ ನಿರೂಪಿಸಿದರು. ರಾಮದುರ್ಗ ಬಸವೇಶ್ವರ ಶಾಲೆ ಪ್ರಾಂಶುಪಾಲ ಎಲ್.ಎಂ.ಅರಿಬೆಂಚಿ ವಂದಿಸಿದರು. ಸುಮಾರು 450ಕ್ಕಿಂತ ಹೆಚ್ಚಿನ ಬಿಪ್ಸ್ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.