ಸಾರಾಂಶ
- ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ । ವಿದ್ಯಾರ್ಥಿಗಳೊಂದಿಗೆ ಸಂವಾದ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿದ್ಯಾರ್ಥಿಗಳು ಕಷ್ಟ ಪಟ್ಟು ಶಿಕ್ಷಣ ಕಲಿತು ವಿದ್ಯಾವಂತರಾದರೆ ಮುಂದಿನ ನಿಮ್ಮ ಜೀವನ ನೆಮ್ಮದಿಯಾಗಿರುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕ ( ಆಡಳಿತ) ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸತತವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಓದಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಏನಾದರೂ ಸಮಸ್ಯೆ ಬಂದಾಗ ಶಿಕ್ಷಕರನ್ನು ಪ್ರಶ್ನಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳಾಗಬೇಕು. ನಿಮ್ಮ ಪ್ರಯತ್ನ ಇಲ್ಲದೆ ನಿಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾದ್ಯವಿಲ್ಲ. ನಿಮ್ಮ ಮನಸ್ಸನ್ನು ಶಿಕ್ಷಣದ ಕಡೆ ಗಮನ ಹರಿಸಬೇಕು. ಕಠಿಣ ಶ್ರಮ ವಹಿಸಿ ಕಲಿಯಬೇಕು. ನೀವುಗಳು ಗುಂಪು ಸೇರಿದಾಗಲೂ ಪಠ್ಯದ ವಿಷಯದ ಬಗ್ಗೆ ಚರ್ಚೆ ಮಾಡಬೇಕು ಎಂದರು.ವಿದ್ಯಾರ್ಥಿಗಳು ಬರೀ ಉತ್ತೀರ್ಣರಾದರೆ ಸಾಲದು. ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಬೇಕು. ಇಲ್ಲದಿದ್ದರೆ ಈ ಸ್ಪರ್ಧಾ ಜಗತ್ತಿನಲ್ಲಿ ಅವಕಾಶಗಳು ಕಡಿಮೆಯಾಗಲಿದೆ. ಏಕಾಗ್ರತೆಯೇ ಕಲಿಕೆಯ ಪ್ರಮುಖ ಅಸ್ತ್ರವಾಗುತ್ತದೆ . ಕಲಿತಿರುವುದನ್ನು ಪದೇ, ಪದೇ ಪುನರಾರ್ವರ್ತನೆ ಮಾಡುತ್ತಾ ಹೋದರೆ ಅದು ನಿಮ್ಮ ಮನಸ್ಸಿನಲ್ಲಿ ಉಳಿಯಲಿದೆ ಎಂದರು.
ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಅವನಿ ಎಂ ಗೌಡ ಈ ಬಾರಿ ಎಸ್‌ಎಸ್‌ಎಲ್ ಸಿಯಲ್ಲಿ 625 ಕ್ಕೆ 616 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂದಿನ ಬಾರಿ ಪರೀಕ್ಷೆಯಲ್ಲಿ ಈ ಶಾಲೆ ಕನಿಷ್ಠ 10 ವಿದ್ಯಾರ್ಥಿ ಗಳು ಇದೇ ರೀತಿ ಅಂಕ ಪಡೆಯಬೇಕು ಎಂದು ಉತ್ಸಾಹ ತುಂಬಿದರು.ನಂತರ ಡಿಡಿಪಿಐ ಮಂಜುನಾಥ್ ಶಿಕ್ಷಕರೊಂದಿಗೆ ಸಂವಾದ ನಡೆಸಿ, 8 ನೇ ತರಗತಿಯಿಂದಲೇ ಕಲಿಕೆಯಲ್ಲಿ ಹಿಂದಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ತಿದ್ದುವ ಕಾರ್ಯ ಮಾಡಬೇಕು. ಇದರಿಂದ 10 ನೇ ತರಗತಿಗೆ ಬರುವಾಗ ಆ ವಿದ್ಯಾರ್ಥಿಗೆ ಒತ್ತಡ ಕಡಿಮೆಯಾಗಲಿದೆ. ವಾರಕ್ಕೊಮ್ಮೆ ಒಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯ ಕ್ರಮ ಮಾಡಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಬೇಕು. ಆಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಮತ್ತು ಕಲಿಕೆ ಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಪೌಷ್ಠಿಕ ಆಹಾರದ ಬಗ್ಗೆ ವೈದ್ಯರನ್ನು ಕರೆಸಿ ಅವರಿಂದ ಮಾಹಿತಿ ಕೊಡಿಸಿದರೆ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ನೀಡುತ್ತಿರುವ ಹಾಲು, ಮೊಟ್ಟೆಯ ಬಗ್ಗೆ ಅರಿವು ಮೂಡುತ್ತದೆ ಎಂದರು.
ಸಭೆ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಎಂ.ಡಿ.ಪ್ರಕಾಶ್ ವಹಿಸಿದ್ದರು. ಸಭೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಧರ್, ಪ್ರೌಢ ಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕ ಎಚ್.ಎಸ್.ಗಂಗಾಧರಪ್ಪ, ಸಹ ಶಿಕ್ಷಕರಾದ ಕೆ.ಆರ್. ಪ್ರಶಾಂತಿ,ಬಿ.ಎಂ.ವಾಸು, ಟಿ.ಮಥಾಯಿ,ಸಿ.ಎಲ್.ಚಂದ್ರಪ್ಪ, ನೀಲಮ್ಮಜಯಂತಿ, ಕು.ವೈಲೆಟ್ ಇದ್ದರು.