ಸುಂದರ ಬದುಕಿಗೆ ಶಿಕ್ಷಣ ದಾರಿದೀಪ: ಪ್ರಾಚಾರ್ಯ ಎಂ.ನಾಸಿರುದ್ದೀನ್‌

| Published : Feb 07 2024, 01:45 AM IST

ಸಾರಾಂಶ

ಚಿತ್ರದುರ್ಗ ಡಯಟ್‍ನಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಕುರಿತು ಜಿಲ್ಲೆಯ ಪಿಡಿಓಗಳಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಸುಂದರ ಜೀವನ ನಡೆಸಲು ಶಿಕ್ಷಣ ದಾರಿದೀಪವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

ನಗರದ ಡಯಟ್‍ನಲ್ಲಿ ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಕುರಿತು ಜಿಲ್ಲೆಯ ಪಿಡಿಓಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು, ಪೋಷಕರು, ಅನುಷ್ಠಾನಾಧಿಕಾರಿಗಳು, ಪಿಡಿಓ ಗಳು ಮತ್ತು ಎಲ್ಲಾ ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯವಾಗಿದೆ . ಶಿಕ್ಷಣದಿಂದ ಯಾವುದೇ ಮಗುವು ವಂಚಿತವಾಗಬಾರದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಕ್ಕಳು ಶಿಕ್ಷಣ ಪಡೆಯಲು ಮತ್ತು ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಭಿವೃದ್ಧಿಯಲ್ಲಿ ಪಿಡಿಓಗಳ ಸಹಕಾರ ಅಗತ್ಯ ಎಂದರು.

ಗ್ರಾಮಮಟ್ಟದಲ್ಲಿನ ಎಲ್ಲ ವ್ಯವಸ್ಥೆಗಳು ಪಿಡಿಓ ಗಳಿಗೆ ಚಿರಪರಿಚಿತವಾಗಿರುತ್ತವೆ. ಶೈಕ್ಷಣಿಕ ವ್ಯವಸ್ಥೆಗೆ ಅಗತ್ಯವಾಗಿ ಬೇಕಾಗಿರುವ ಮೂಲ ಸೌಕರ್ಯದ ಕಡೆ ಅವರುಗಳು ಗಮನ ಹರಿಸಬೇಕು. ಗ್ರಾಮೀಣ ಶಿಕ್ಷಣ ವ್ಯವಸ್ಥಗೆ ಸದೃಢ ಅಡಿಪಾಯ ಒದಗಿಸಬೇಕೆಂದು ಹೇಳಿದರು.

ನೋಡೆಲ್ ಅಧಿಕಾರಿ ಎನ್.ರಾಘವೇಂದ್ರ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶೈಕ್ಷಣಿಕ ಭಾಗೀದಾರರ ಪಾತ್ರ ಮುಖ್ಯವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರುವುದು, ಶಿಕ್ಷಣದ ಹಕ್ಕು, ಗುಣಮಟ್ದದ ಶಿಕ್ಷಣ ವಿಷಯ ಕುರಿತು ಮಾಹಿತಿ ನೀಡಿದರು. ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇ ಶ್ವರ, ಎಸ್.ಆರ್.ಪೂರ್ಣಿಮಾ, ಉಪನ್ಯಾಸಕರಾದ ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ಶಿಕ್ಷಕ ಪ್ರಸನ್ನ ಕುಮಾರ್, ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.