ಸಾರಾಂಶ
ನಮ್ಮ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿದ್ದು 11 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 9ನೇ ತರಗತಿಯಿಂದ 10ನೇ ತರಗತಿಗೆ ಪಾಸ್ ಆಗಿರುವ ಮಕ್ಕಳು ಹೆಚ್ಚು ಶ್ರಮಪಟ್ಟು ವ್ಯಾಸಂಗ ಮಾಡಿ ಇದೇ ರೀತಿ ಉತ್ತಮ ಅಂಕ ಗಳಿಸುವಂತೆ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹಲಗೂರು
ಭವಿಷ್ಯದಲ್ಲಿ ಜೀವನ ರೂಪಿಸಿಕೊಳ್ಳಲು ಪ್ರೌಢಶಾಲಾ ಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ಪ್ರಾಂಶುಪಾಲೆ ಲಲಿತಾಂಬ ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.ಚನ್ನಪಟ್ಟಣ ರಸ್ತೆಯ ಜೆ.ಜೆ ಪಬ್ಲಿಕ್ ಶಾಲೆಯಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 11 ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆ ವಿದ್ಯಾರ್ಥಿನಿ ಎಚ್.ಎನ್. ರೇಷ್ಮಾ 615 ಅಂಕ ಪಡೆದು ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೇ ಈ ಮೂಲಕ ನಮ್ಮ ಶಾಲೆಗೆ ಕೀರ್ತಿ ತಂದಿರುವುದು ನಮಗೆ ಸಂತಸದ ತಂದಿದೆ ಎಂದರು.ನಮ್ಮ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿದ್ದು 11 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 9ನೇ ತರಗತಿಯಿಂದ 10ನೇ ತರಗತಿಗೆ ಪಾಸ್ ಆಗಿರುವ ಮಕ್ಕಳು ಹೆಚ್ಚು ಶ್ರಮಪಟ್ಟು ವ್ಯಾಸಂಗ ಮಾಡಿ ಇದೇ ರೀತಿ ಉತ್ತಮ ಅಂಕ ಗಳಿಸುವಂತೆ ಸಲಹೆ ನೀಡಿದರು.
ಶಾಲೆಗೆ ಶೇಕಡ 100 ಫಲಿತಾಂಶ ತರುವುದು ಅಷ್ಟು ಸುಲಭವಲ್ಲ. ಈ ಸಾಧನೆಯಲ್ಲಿ ಇಲ್ಲಿಯ ಶಿಕ್ಷಕರ ಪಾತ್ರ ಕೂಡ ಇದೆ. ಪೋಷಕರು ಮಕ್ಕಳಿಗಿಂತ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳಿಗೆ ಉತ್ತೇಜನ ನೀಡಿದ್ದಾರೆ. ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಅನುಕೂಲವಾಗುವಂತೆ ಪ್ರೌಢಶಾಲಾ ಮಟ್ಟದ ಶಿಕ್ಷಣ ಮಹತ್ವದ್ದಾಗಿದೆ ಎಂದರು.ಏನಾದರೂ ಸಾಧನೆ ಮಾಡುತ್ತೇವೆ ಎಂದು ನಿರ್ಧರಿಸಿದರೆ ಆತ್ಮಸ್ಥೈರ್ಯ ದೊರೆಯುತ್ತದೆ. ಪೋಷಕರು ಕೂಡ ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಕ ವೃಂದವು ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
615 ಅಂಕ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಎಚ್ .ಎನ್.ರೇಷ್ಮಾ ಅಭಿನಂದನೆ ಸ್ವೀಕರಿಸಿ, ನನ್ನ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರ ಪರಿಶ್ರಮ ಹೆಚ್ಚು. ರಾತ್ರಿ ವೇಳೆಯೂ ತರಗತಿ ನಡೆಸಲಾಗುತಿತ್ತು, ಯಾವುದೇ ಸಮಯವಾಗಲಿ ನಮ್ಮ ಶಿಕ್ಷಕರಿಗೆ ಕರೆ ಮಾಡಿದಾಗ ನನಗೆ ಗೊತ್ತಿಲ್ಲದ ವಿಷಯಗಳನ್ನು ಅರ್ಥವಾಗುವಂತೆ ತಿಳಿಸುತ್ತಿದ್ದರು. ಇದರಿಂದ ನನಗೆ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ನನಗೆ ಈ ಶಾಲೆಯಿಂದ ಹೋಗುತ್ತಿರುವುದಕ್ಕೆ ತವರಿನ ಮನೆ ಹೋಗುವಂತಾಗುತ್ತಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶಾಲೆ ಸಂಸ್ಥಾಪಕ ಸೋಮಶೇಖರ್ ಮತ್ತು ಪ್ರಾಂಶುಪಾಲೆ ಲಲಿತಾಂಬ ಸೋಮಶೇಖರ್, ಶಿಕ್ಷಕ ವೃಂದ ಸನ್ಮಾನಿಸಿ ಅಭಿನಂದಿಸಿದರು.