ಸಾರಾಂಶ
ವಿದ್ಯಾರ್ಥಿನಿಯರು ಬದುಕಿನಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಮೀರಿ ಸಾಧನೆ ಮಾಡುವ ಮೂಲಕ ಉನ್ನತ ಹಂತ ತಲುಪಬೇಕಾಗುತ್ತದೆ
ಹೂವಿನಹಡಗಲಿ: ಪ್ರತಿ ಕುಟುಂಬಕ್ಕೂ ಶಿಕ್ಷಣ ಬಹಳ ಅವಶ್ಯಕವಾಗಿದೆ. ಇದೊಂದು ರೀತಿಯಲ್ಲಿ ಶಕ್ತಿಯುತ ಆಯುಧ ಇದ್ದ ಹಾಗೆ. ಇದಕ್ಕೆ ಬದುಕು ಬದಲಾಯಿಸುವ ಶಕ್ತಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ, ಪ್ರಥಮ ಪಿಯು ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿನಿಯರು ಬದುಕಿನಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಮೀರಿ ಸಾಧನೆ ಮಾಡುವ ಮೂಲಕ ಉನ್ನತ ಹಂತ ತಲುಪಬೇಕಾಗುತ್ತದೆ. ಆಲೋಚನೆ ಮಾಡಿ ಹೆಜ್ಜೆ ಇಡಬೇಕೆಂದು ಹೇಳಿದರು.
ಜೀವನದಲ್ಲಿ ಯಶಸ್ಸು ಸಣ್ಣ ಸಣ್ಣ ಶ್ರಮದಿಂದ ಕ್ರೋಡೀಕರಣವಾಗುತ್ತದೆ. ಒಂದೇ ದಿನದಲ್ಲೇ ಫಲ ಸಿಗುವುದಿಲ್ಲ. ತಮ್ಮ ಗುರಿಯನ್ನು ವಿಭಜಿಸಿಕೊಳ್ಳಬೇಕಿದೆ. ಹಂತ ಹಂತವಾಗಿ ಗುರಿಯನ್ನು ತಲುಪಬೇಕು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ, ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಕಷ್ಟಗಳು ತಾತ್ಕಾಲಿಕ. ಅದನ್ನು ಮೀರಿ ಬದುಕಬೇಕು. ನಿರ್ಲಕ್ಷಿಸಿದರೆ ಜೀವನ ಪೂರ್ತಿ ವ್ಯಥೆ ಪಡಬೇಕಾಗುತ್ತದೆ ಎಂದರು.ಮಹಿಳೆಯರಿಗೆ ಸಮಾನ ಹಕ್ಕಿದೆ. ಮಹಿಳೆ ಕುಟುಂಬವನ್ನು ಮುನ್ನಡೆಸಲು ಸಮರ್ಥವಾಗಿದ್ದಾಳೆ. ನಿಮಗೆ ಮಹಿಳೆ ಎಂದು ಕೀಳರಿಮೆ ಬೇಡ. ನಿಮ್ಮಲ್ಲಿರುವ ಪ್ರತಿಭೆ ಹೊರಬರಬೇಕಾದರೆ ಹೆಚ್ಚು ಶ್ರಮಪಟ್ಟು ಅಭ್ಯಾಸ ಮಾಡಬೇಕು. ನೀವು ಇತರರ ಮೇಲೆ ಅವಲಂಬನೆ ಆಗಬಾರದು ಎಂದರು.
ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಲು ಮೊದಲು ಪ್ರಯತ್ನಿಸಿ. ಜಗತ್ತಿನ ಬೆಳವಣಿಗೆ ಕುರಿತು ನಿತ್ಯ ಅಪಡೇಟ್ ಆಗಬೇಕು, ಕ್ಷೇತ್ರದಲ್ಲಿ ಕೇವಲ ರಸ್ತೆ, ಗುಂಡಿ ಮುಚ್ವುವುದು ಅಭಿವೃದ್ಧಿಯಲ್ಲ. ಪ್ರತಿ ಹಳ್ಳಿಯೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದ ಅವರು, ಈ ಪ್ರೌಢ ಶಾಲಾ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ₹1.68 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದರು.ಕಾಲೇಜು ಪ್ರಾಚಾರ್ಯ ಎ.ಕೊಟ್ರಗೌಡ ಮಾತನಾಡಿ, ಈ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚು ಅಭ್ಯಾಸ ಮಾಡುತ್ತಿದ್ದಾರೆ. ಶಾಸಕರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಉತ್ತಮ ಫಲಿತಾಂಶ ನುರಿತ ಬೋಧಕ ಸಿಬ್ಬಂದಿ ಮೂಲಕ ಗುಣಮಟ್ಟದ ಶಿಕ್ಷಣ, ಉತ್ತಮ ಹಾಸ್ಟೆಲ್ ವ್ಯವಸ್ಥೆ ಇದೆ. ಇಲ್ಲದಿದ್ದರೆ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಚರಂಡಿ ನೀರು ಕಾಲೇಜಿನೊಳಗೆ ಬರುತ್ತದೆ. ಯುಜಿಡಿ ವ್ಯವಸ್ಥೆಯಿಲ್ಲ. ಸೊಳ್ಳೆಗಳಿಂದ ಮಕ್ಕಳಿಗೆ ರೋಗ ರುಜಿನಗಳ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ಈ ಕುರಿತು ಪುರಸಭೆ ಗಮನಹರಿಸಬೇಕು. ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಆಡಿಟೋರಿಯಂ ಅಗತ್ಯವಿದೆ. ಈ ಕುರಿತು ಶಾಸಕರು ಗಮನ ಹರಿಸಬೇಕೆಂದು ಮನವಿ ಮಾಡಿದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪುರಸಭೆ ಸದಸ್ಯ ಮಂಜುನಾಥ ಜೈನ್ ಸೇರಿದಂತೆ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.