ಯಾದವ ಸಮಾಜದವರು ಆರ್ಥಿಕವಾಗಿ ಸಬಲರಾಗುವ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯವಾಗಬೇಕು
ಕುಷ್ಟಗಿ: ಶಿಕ್ಷಣವೇ ಸಮಾಜದ ಪ್ರಗತಿಯ ಮೂಲಾಧಾರವಾಗಿದ್ದು, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದ ಮೂಲಕ ಸಮಾಜದ ಗೌರವ ಹೆಚ್ಚಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಕರೆ ನೀಡಿದರು.
ಪಟ್ಟಣದ ಜಗದ್ಗುರು ರೇಣುಕಾಚಾರ್ಯ ಮಂಗಲ ಭವನದಲ್ಲಿ ಶ್ರೀಕೃಷ್ಣ ಯಾದವ ಸಮಾಜದಿಂದ ನಡೆದ ಎಸ್ಸೆಸ್ಸೆಲ್ಸಿ,ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಯಾದವ ಸಮಾಜದವರು ಆರ್ಥಿಕವಾಗಿ ಸಬಲರಾಗುವ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯವಾಗಬೇಕು, ಸರ್ಕಾರದ ಯೋಜನೆ ಪಡೆಯುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದ ಅವರು, ತಾಲೂಕು ಕೇಂದ್ರದಲ್ಲಿ ಯಾದವ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವ ಮೂಲಕ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದೆಂದು ಭರವಸೆ ನೀಡಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ,ಯಾದವ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಹೆಚ್ಚು ಗಮನ ಹರಿಸುವ ಜತೆಗೆ ಮುಖ್ಯ ವಾಹಿನಿಗೆ ಬರುವ ಮೂಲಕ ರಾಜಕೀಯವಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.ಯಾದವ ಸಮಾಜದ ಅಧ್ಯಕ್ಷ ಶಿವಪ್ಪ ಎಚ್. ಮಿರ್ಜಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ರವಿಕುಮಾರ ಹಿರೇಮಠ, ಭೀಮನಗೌಡ ಕಟ್ಟಿ, ರವಿ ಕುರಗೋಡ, ನಿರಂಜನ್ , ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಯಮನೂರಪ್ಪ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ಭೀಮಪ್ಪ ಗೊಲ್ಲರ, ದ್ಯಾಮಣ್ಣ ಉಪ್ಪಟ್ಟಿ, ವೆಂಕಟೇಶ ಬಿಂಗಿ, ದುರುಗಪ್ಪ, ರಾಮಣ್ಣ ಗುಳೇದ್, ಹನುಮಗೌಡ, ಬಾಲಪ್ಪ ಗೊಲ್ಲರ ಹಾಗೂ ಸಮಾಜ ಮುಖಂಡರು ಇದ್ದರು.ಯಾದವ ಸಮಾಜದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಸಮಾಜದ ಹೆಸರನ್ನು ಎತ್ತರಕ್ಕೆ ತರುವಂತೆ ಪ್ರಯತ್ನಿಸಬೇಕು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜದಿಂದ ಪ್ರೋತ್ಸಾಹ ಸಿಗುವುದು ಅತ್ಯಂತ ಮುಖ್ಯ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ ಎಂದು ವಿಧಾನ ಪರಿಷತ್ತ ಸದಸ್ಯ ಡಿ.ಟಿ. ಶ್ರೀನಿವಾಸ ಯಾದವ ತಿಳಿಸಿದ್ದಾರೆ.
ಯಾದವ ಸಮಾಜದವರು ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಿ ಮಠಮಾನ್ಯಗಳ ಮೂಲಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಒಬಿಸಿಯಲ್ಲಿ ಬರುವ ಜನಾಂಗದವರು ಆರ್ಥಿಕವಾಗಿ ಸದೃಢರಾಗಬೇಕಿದೆ ಎಂದು ಚಿತ್ರದುರ್ಗ ಯಾದವ ಸಂಸ್ಥಾನದ ಯಾದವಾನಂದ ಮಹಾಸ್ವಾಮೀಜಿ ತಿಳಿಸಿದ್ದಾರೆ.