ಸಾರಾಂಶ
ಶಿರಹಟ್ಟಿ: ಶಿಕ್ಷಣ ಜೀವನದ ಬಹುದೊಡ್ಡ ಆಸ್ತಿ. ಕಲಿಕೆಯಿಂದ ಮಾತ್ರ ಮನೆ, ಸಮಾಜ, ದೇಶ ಉದ್ಧಾರ ಮಾಡಲು ಸಾಧ್ಯವಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಂದೆ ತಾಯಿಗಳ ಮುಖ್ಯ ಜವಾಬ್ದಾರಿಯಾಗಿದೆ. ಶಿಕ್ಷಣದೊಂದಿಗೆ ಸಂಸ್ಕಾರ ಕೂಡ ಮುಖ್ಯ ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಕರೆ ನೀಡಿದರು.
ಗುರುವಾರ ಸಂಜೆ ಪಟ್ಟಣದ ಅಂಬೇಡ್ಕರ ನಗರದಲ್ಲಿ ಶ್ರೀಮರಿಯಮ್ಮದೇವಿ ಹಾಗೂ ಶ್ರೀ ಸ್ವಾರೆಮ್ಮದೇವಿಯ ೭೦ನೇ ವರ್ಷದ ಅಗೀನ ಮತ್ತು ಜಾತ್ರಾಮಹೋತ್ಸವ ಕಾರ್ಯಕ್ರಮದ ನಿಮಿತ್ತ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ಶಿಕ್ಷಣ ಇಂದಿನ ದಿನಮಾನಗಳಲ್ಲಿ ಅತ್ಯಂತ ಮಹತ್ವ ಪಡೆದಿದೆ. ಅದರ ಜತೆಗೆ ಸಂಸ್ಕೃತಿಯು ಅತೀ ಅವಶ್ಯವಿದೆ. ಮಕ್ಕಳು, ಯುವಕರು ನೀತಿವಂತರಾಗಿ ಬದುಕನ್ನು ರೂಪಿಸಿಕೊಳ್ಳಬೇಕು. ಸಾಂಸ್ಕೃತಿಕವಾಗಿ ಹದಗೆಡುತ್ತಿರುವ ಇಂದಿನ ಸಮಾಜದ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಚಿಕ್ಕ ವಯಸ್ಸಿನ ಮಕ್ಕಳು ಸಹ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಾ ಅಪರಾದ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ದುರಂತ ಎಂದರು.
ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಆದ್ದರಿಂದ ಸರ್ಕಾರ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂಬ ಉದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡುತ್ತಿದೆ. ಸತತ ಅಧ್ಯಯನದ ಮೂಲಕ ಗುರಿ ಮುಟ್ಟಲು ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆ ಹೊರತಾಗಿ ಬೇರೆ ಯಾವುದೇ ಗಣನೆಗೆ ಬರುವುದಿಲ್ಲ. ಸರ್ಕಾರ ನೀಡುವ ನೆರವನ್ನು ಪಡೆದು ಸದುಪಯೋಗಪಡಿಸಿಕೊಂಡು ಸಾಧನೆಗೆ ಮುಂದಾಗಬೇಕು.ಆ ಮೂಲಕ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿರುವ ಪ್ರಜ್ಞಾವಂತರು ಅನಕ್ಷರತೆ ಅಳಿಸಿ ಹಾಕಿ ಸ್ವಸ್ಥ ಸಮಾಜ ನಿರ್ಮಿಸಲು ಶ್ರಮಿಸಬೇಕು. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಸಮಾಜದ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಇತ್ತೀಚೆಗೆ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಉಳಿಯುತ್ತಿರುವುದು ವಿಷಾಧದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ರಾಷ್ಟ್ರಕ್ಕೆ ಕೊಡುಗೆ ನೀಡುವುದು ನಿಮ್ಮ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕು. ತಂದೆ ತಾಯಿಗಳು ಮಕ್ಕಳನ್ನು ಕಳಕಳಿಯಿಂದ ಓದಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.ವ್ಯಕ್ತಿತ್ವ, ಬದುಕು ರೂಪಿಸಿಕೊಳ್ಳಲು ಶಿಕ್ಷಣವೇ ಹೊರತು ಕಾಲಹರಣಕ್ಕೆ ಇದು ಕಾಲವಲ್ಲ. ಜ್ಞಾನ ಸಂಪಾದನೆಗೆ ಮುಂದಾಗಿ ಧನ ಸಂಪಾದನೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಅಡ್ಡದಾರಿ ಹಿಡಿದು ಬದುಕನ್ನು ಖೆಡ್ಡದಲ್ಲಿ ಕೆಡವಿಕೊಳ್ಳುವುದು ಬೇಡ. ಪಾಲಕರ ಪ್ರೀತಿ, ಮಾರ್ಗದರ್ಶನ, ವಿದ್ಯಾರ್ಥಿಗಳ ನಿರಂತರ ಪರಿಶ್ರಮದಿಂದ ಗುರಿ ನಿಲುಕಲು ಸಾಧ್ಯ ಎಂದರು.
ಹುಬ್ಬಳ್ಳಿ, ಧಾರವಾಡ ನಗರ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಸುಜಾತ ದೊಡ್ಡಮನಿ, ಎಚ್.ಡಿ. ಮಾಗಡಿ, ಗುರುನಾಥ ದಾನಪ್ಪನವರ, ಡಿ.ಕೆ.ಹೊನ್ನಪ್ಪನವರ, ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಮಂಜುನಾಥ ಘಂಟಿ ಮಾತನಾಡಿದರು.ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸಿ.ಕೆ. ಮುಳಗುಂದ, ಎಂ.ಕೆ.ಲಮಾಣಿ, ಅಜ್ಜು ಪಾಟೀಲ, ಸೋಮವಗೌಡ ಮರಿಗೌಡ್ರ, ಅಕಬರ ಯಾದಗಿರಿ, ಚಂದ್ರು ಹರಿಜನ, ಶಶಿಧರ ಶಿರಸಂಗಿ, ಮಂಜುನಾಥ ಅರಪಲ್ಲಿ, ಮುತ್ತು ಭಾವಿಮನಿ, ಉಡಚಪ್ಪ ನೀಲಣ್ಣವರ, ಮಾಬೂಸಾಬ್ ಲಕ್ಷ್ಮೇಶ್ವರ ಇತರರು ಇದ್ದರು.