ಶಿಕ್ಷಣ ವ್ಯಕ್ತಿತ್ವ ರೂಪಿಸುವ ಮಾಧ್ಯಮ: ಉಮೇಶ್

| Published : Feb 28 2024, 02:36 AM IST

ಸಾರಾಂಶ

ಬಾಳೆಹೊನ್ನೂರು ಸಮೀಪದ ಕುಂದೂರು ಅಪೂರ್ವ ಸ್ವ ಸಹಾಯ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಕೀಲ ಎಚ್.ಎಚ್.ಕೃಷ್ಣಮೂರ್ತಿ ಅವರಿಗೆ ಅಪೂರ್ವ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಶಿಕ್ಷಣ ಪ್ರತಿಯೊಬ್ಬರ ಬದುಕಿಗೆ ದೃಷ್ಟಿ ಕೊಡಬೇಕಿದ್ದು, ಶಿಕ್ಷಣ ಮನುಷ್ಯರ ವ್ಯಕ್ತಿತ್ವ ರೂಪಿಸುವ ಮಾಧ್ಯಮವಾಗಿ ಹೊರಹೊಮ್ಮಬೇಕಿದೆ ಎಂದು ಹರಿಹರಪುರ ಪ್ರಭೋಧಿನಿ ಗುರುಕುಲದ ಮೇಲ್ವಿಚಾರಕ ಉಮೇಶ್ ಹೇಳಿದರು.

ಸಮೀಪದ ಹೇರೂರು ಗ್ರಾಪಂ ವ್ಯಾಪ್ತಿಯ ಕುಂದೂರಿನಲ್ಲಿ ಅಪೂರ್ವ ಸ್ವ ಸಹಾಯ ಸಂಘ ಆಯೋಜಿಸಿದ್ದ ಸಂಘದ ಹನ್ನೊಂದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ನಮಗೆ ವ್ಯಕ್ತಿತ್ವ ವಿಕಾಸ ಮಾಹಿತಿಗಳಿಂದ ಮಾತ್ರ ಬರುವುದಿಲ್ಲ. ಮಾಹಿತಿಗಳನ್ನು ತಿಳಿದುಕೊಳ್ಳುವುದು ಮಾತ್ರ ವಿದ್ಯಾಭ್ಯಾಸವೂ ಅಲ್ಲ. ವಿದ್ಯಾವಂತರಾಗಬೇಕು ಎಂದರೆ ಕೇವಲ ಶಾಲಾ ಕಾಲೇಜುಗಳಿಗೆ ತೆರಳಿದರೆ ಸಾಲುವುದಿಲ್ಲ. ಜೀವನದ ಮೌಲ್ಯಗಳನ್ನು ಅರಿತು ಸಮಾಜಕ್ಕೆ ಮೇಲ್ಪಂಕ್ತಿಯಾದರೆ, ವಿಚಾರ ಆಚಾರಗಳಂತೆ ನಮ್ಮ ಜೀವನದಲ್ಲಿ ಸಂಕಲ್ಪ ತೊಟ್ಟು ಮುನ್ನಡೆದರೆ ಅದೇ ನಿಜವಾದ ಶಿಕ್ಷಣವಾಗಲಿದೆ ಎಂದರು.

ಉಪನ್ಯಾಸಕ ಜನಾರ್ಧನ ಮಂಡಗಾರು ಮಾತನಾಡಿ, ಧರ್ಮವೆಂದರೆ ಸನಾತನ ಮಾತ್ರ. ಉಳಿದದ್ದು ಎಲ್ಲವೂ ಕೇವಲ ಮತಗಳು. ಎಂದೂ ನಶಿಸದೆ ಇರುವುದೇ ಸನಾತನ ಧರ್ಮವಾಗಿದೆ. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಕೊನೆಯಿಲ್ಲ ಎಂಬುದು ಸನಾತನ ಧರ್ಮದಲ್ಲಿ ತಿಳಿಸಲಾಗಿದೆ.

ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಆದರ್ಶಪ್ರಾಯವಾಗಿದ್ದು, ವಿದೇಶಿಗರು ಸಹ ಇಲ್ಲಿನ ಸಂಸ್ಕೃತಿ ಕಲಿಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸಂಸ್ಕಾರ, ಶಿಕ್ಷಣ ಒಟ್ಟಾದರೆ ಮಾತ್ರ ಧರ್ಮವಾಗಲಿದೆ. ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸವಾಗಬೇಕಿದೆ ಎಂದರು.

ವಕೀಲ ಎಚ್.ಎಚ್.ಕೃಷ್ಣಮೂರ್ತಿ ಅಪೂರ್ವ ಸಹಕಾರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಎಂಬುದು ಮರೀಚಿಕೆಯಾಗಿದ್ದು, ಉಳ್ಳವರು, ಪ್ರಭಾವಿಗಳು, ಹಣವಂತರು ಪ್ರಕರಣಗಳನ್ನು ದೂರ ಎಳೆದು ನ್ಯಾಯವನ್ನು ದೂರ ಮಾಡುತ್ತಿದ್ದಾರೆ. ಹಿಂದೆ ಗ್ರಾಮೀಣ ಭಾಗದಲ್ಲಿ ಇದ್ದ ಪಂಚಾಯಿತಿ ಕಟ್ಟೆಗಳಲ್ಲಿ ಉತ್ತಮ ನ್ಯಾಯ ದೊರೆಯುತಿತ್ತು. ಇಂದು ಪುನಃ ಅದೇ ಮಾದರಿಯಲ್ಲಿ ನಡೆಯಬೇಕಿದೆ. ವ್ಯಾಜ್ಯಗಳನ್ನು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುವುದು ಉತ್ತಮವಾಗಿದೆ ಎಂದರು.

ಸಂಘದ ಅಧ್ಯಕ್ಷ ಕೆ.ಎಸ್.ಪ್ರಕಾಶ್‌ಭಟ್, ಕಾರ್ಯದರ್ಶಿ ವಿ.ಜೆ.ರೋಹಿತ್, ಹೇರೂರು ಪಿಎಸಿಎಸ್ ಸಿಇಓ ಕೆ.ಪಿ.ವಿಶ್ವನಾಥ್, ಎನ್.ಆರ್.ಪುರ ತಾಲೂಕು ಚುಸಾಪ ಅಧ್ಯಕ್ಷ ಚೈತನ್ಯ ವೆಂಕಿ, ಕಾಫಿ ಬೆಳೆಗಾರ ಗುರುಪ್ರಸಾದ್ ಹೆಬ್ಬಾರ್, ಅಪೂರ್ವ ಬ್ಯಾಂಕ್ ಸಿಇಓ ಕೆ.ಎಸ್.ಸುಧೀಂದ್ರ, ಪ್ರಸನ್ನಭಟ್, ಸುದರ್ಶನ್ ಭಟ್, ಕೆ.ಪ್ರಶಾಂತ್‌ಕುಮಾರ್, ಸಾಕ್ಷಿ ಸದಾಶಿವ, ಶರತ್ ಮೇಲ್ಪಾಲ್ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಕುಂದೂರು ಮತ್ತು ವೀರಗಲ್ಲುಮಕ್ಕಿ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ಪರಿಕರಗಳನ್ನು ನೀಡಲಾಯಿತು. ಹರಿಹರಪುರ ಪ್ರಭೋಧಿನಿ ಗುರುಕುಲಕ್ಕೆ ಧನ ಸಹಾಯ ಮಾಡಲಾಯಿತು.

ಲೋಕಕಲ್ಯಾಣಾರ್ಥವಾಗಿ ಶ್ರೀದುರ್ಗಾ ಹೋಮ ನೆರವೇರಿಸಲಾಯಿತು. ಸಂಜೆ ಅಲಸೆಯ ಶ್ರೀ ನಾಗೇಶ್ವರಿ ಸುಬ್ರಮಣ್ಯಸ್ವಾಮಿ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮಾಡಲಾಯಿತು.