ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ದಲಿತರು, ಶೋಷಿತರು ಮತ್ತು ತಳ ಸಮುದಾಯದವರು ಹಸಿವು ಮತ್ತು ಅಸ್ಪಶ್ಯತೆ, ಗುಲಾಮಗಿರಿಯಿಂದ ಹೊರಬಂದು ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಬೇಕಾದರೆ ಅಕ್ಷರದ ಬೆಳಕು ಅತಿ ಮುಖ್ಯವಾಗಿದೆ ಎಂದು ಸಾಹಿತಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶನಿವಾರ ನಿವೃತ್ತ ಶಿಕ್ಷಕ ಕೆ.ಬಿ. ಗುರುಮೂರ್ತಿ ಅವರ ‘ಒಡಲ ಧ್ವನಿ’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ದಲಿತ ಸಮುದಾಯ ಸ್ವಾಭಿಮಾನದಿಂದ ಬದುಕಲು ಹಾಗೂ ಹೊಸ ಬೆಳಕಿನ ಕಡೆಗೆ ಸಾಗಲು ಸಾಧ್ಯ ಎಂದು ಹೇಳಿದರು.
ಗುರುಮೂರ್ತಿ ಅವರ ಒಡಲ ಧ್ವನಿ ಕಾದಂಬರಿಯಲ್ಲಿ ನಮ್ಮ ಸಮಾಜದಲ್ಲಿ ದಲಿತರ ಬದುಕು, ಬವಣೆ ಮತ್ತು ಪ್ರಸ್ತುತ ಸನ್ನಿವೇಶಗಳನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಇದು ದಲಿತ ಸಾಹಿತ್ಯದ ಹೊಸ ಮೈಲುಗಲ್ಲಾಗಲಿದೆ. ಏಕೆಂದರೆ ಗುರುಮೂರ್ತಿ ಅವರು ದಲಿತ ಚಳವಳಿಯ ಪ್ರೇರಣೆಯ ವ್ಯಕ್ತಿಯಾಗಿ ತಮ್ಮ ಅನುಭವವನ್ನು ಅಕ್ಷರ ರೂಪದಲ್ಲಿ ಹೊರತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇಂದಿಗೂ ಕೂಡ ಸಮಾಜದಲ್ಲಿ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿದ್ದು ಅದನ್ನು ಪ್ರತಿರೋಧಿಸುವ ಶಕ್ತಿ ಇಲ್ಲದೆ ಇರಲು ಪ್ರಮುಖ ಕಾರಣ ಹಸಿವು, ಅಸ್ಪೃಶ್ಯತೆ ಹಾಗೂ ನಮ್ಮನ್ನು ಆಳುವ ಸರ್ಕಾರಗಳು ಕಾರಣ. ಜನಪ್ರತಿನಿಧಿಗಳು ಅಭಿವೃದ್ಧಿಯನ್ನು ತಮ್ಮ ಭಾಷಣಕ್ಕೆ ಮಾತ್ರ ಸೀಮಿತವಾಗಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಅವರು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವ ದೇಶ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುವಂತಹ ಸನ್ನಿವೇಶ ಸೃಷ್ಟಿಸಿದೆಯೋ ಆ ದೇಶ ಎಂದೂ ಕೂಡ ಮುಂದುವರಿಯುವ ದೇಶವಾಗಲು ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಮೌಲ್ಯ ಕುಸಿದು ಹೋಗುತ್ತಿದೆ. ಆಡಳಿತ ನಡೆಸುವವರು ಭಾಷಣದಲ್ಲಿ ಸುಳ್ಳು - ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ದಲಿತರು ಎಲ್ಲಿಯವರೆಗೆ ಮೂಢನಂಬಿಕೆ, ಅಸ್ಪೃಶ್ಯತೆಯನ್ನು ಮೆಟ್ಟಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.ತುಮಕೂರಿನ ಸಾಹಿತಿ ಡಾ. ಜಿ.ವಿ. ಆನಂದಮೂರ್ತಿ ಕೃತಿಯ ಬಗ್ಗೆ ಮಾತನಾಡಿ, ಗುರುಮೂರ್ತಿ ಅವರ ಒಡಲ ಧ್ವನಿ ಕಾದಂಬರಿ ಶೋಷಿತರ ವಿಮೋಚನ ಕೃತಿಯಾಗಿದೆ. ಇದರಲ್ಲಿ ಪ್ರತಿಯೊಬ್ಬರ ಭಾವನೆ ಮತ್ತು ಜೀವನ ಅಡಗಿದೆ. ಲೇಖಕರು ತಮ್ಮ ಜೀವನ ಹಾಗೂ ತಮ್ಮ ಸುತ್ತಮುತ್ತಲಿನ ದಲಿತರ ಬದುಕಿನ ವಾಸ್ತವತೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ರಾಜಾರಾಮ್ ಮಾತನಾಡಿ, ನನ್ನ ಶಿಷ್ಯ ಗುರುಮೂರ್ತಿ. ಅವರು ಸಾಹಿತಿಯಾಗಿ, ಶಿಕ್ಷಕರಾಗಿ ಉತ್ತಮ ಕೆಲಸ ಮಾಡಿದ್ದಾರೆ, ಅವರ ಕೃತಿಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ. ಇದು ನನಗೆ ಅತ್ಯಂತ ಖುಷಿ ವಿಚಾರದ ಜತೆಗೆ ಈ ಕೃತಿಯನ್ನು ನನಗೆ ಅರ್ಪಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದರು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಕೆ.ಬಿ ಗುರುಮೂರ್ತಿ ರಚಿತ ಒಡಲ ಧ್ವನಿ ಕೃತಿ ದಲಿತ ಚಳವಳಿ ಹರಿದು ಬಂದ ದಾರಿಯ ಪ್ರತಿಬಿಂಬ. ಸಮುದಾಯಗಳು ಅನುಭವಿಸಿರುವ ಸಂಕಷ್ಟವನ್ನು ಕಾದಂಬರಿಯಲ್ಲಿ ಎಲೆಳೆಯಾಗಿ ಬರೆಯಲಾಗಿದೆ, ದಲಿತರ ಹೋರಾಟದ ಹಾದಿಯಲ್ಲಿ ಅನೇಕರು ಮೃತಪಟ್ಟಿದ್ದಾರೆ. ಅವರ ಹೋರಾಟದ ತುಡಿತ ಹಾಗೂ ನೋವಿನ ಸಂಕೇತ ಈ ಪುಸ್ತಕದಲ್ಲಿ ಬಿಚ್ಚಿಸಲಾಗಿದೆ ಎಂದರು.ಅನೇಕರ ತ್ಯಾಗ ಬಲಿದಾನದ ಫಲವಾಗಿ ಇಂದು ಬದುಕಿರುವವರು ಸಮೃದ್ಧಿ ಜೀವನ ಸಹಿಸುವಂತೆ ಆಗಿದೆ. ದಾಖಲಾಗದ ದಲಿತ ಪರ ಹೋರಾಟದ ಸವಾಲುಗಳು ಈ ಕಾದಂಬರಿಯಲ್ಲಿ ಲಿಖಿತ ರೂಪದಲ್ಲಿ ಕಾಣ ಸಿಗುತ್ತವೆ.ಲೇಖಕ ದಲಿತ ಚಳುವಳಿಯ ಒಡನಾಟದಿಂದ ನನ್ನ ಬರವಣಿಗೆಗೆ ಶಕ್ತಿ ಬಂದಿದೆ. ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳುವಳಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೋರಾಟದ ಅವಧಿಯಲ್ಲಿನ ಸವಾಲುಗಳನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಕವಿ ಡಾ. ಎಂ.ಎಸ್. ಶೇಖರ್, ಲೇಖಕ ಕೆ.ಪಿ. ಗುರುಮೂರ್ತಿ, ಸಾಹಿತಿ ರೂಪ ಹಾಸನ್ ಸೇರಿದಂತೆ ಇನ್ನಿತರರು ಹಾಜರಿದ್ದರು.;Resize=(128,128))
;Resize=(128,128))