ಬೌದ್ಧಿಕ ಬೆಳವಣಿಗೆ ಬಾಗಿಲು ತೆರೆಯುವ ಸಾಧನವೇ ಶಿಕ್ಷಣ

| Published : Jan 07 2024, 01:30 AM IST

ಬೌದ್ಧಿಕ ಬೆಳವಣಿಗೆ ಬಾಗಿಲು ತೆರೆಯುವ ಸಾಧನವೇ ಶಿಕ್ಷಣ
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ಅಂಧತ್ವ ಹಾಗೂ ಶೋಕಿ ಬದುಕಿನ ಹಿಂದೆ ಬೀಳುತ್ತಿರುವ ಯುವಕರು ಹಣ ಸಂಪಾದನೆ ಉದ್ದೇಶದಿಂದ ಕತ್ತಲೆ ಜಗತ್ತಿನ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದ್ದಾರೆ, ವಿಭಿನ್ನ ಅಭಿಪ್ರಾಯಗಳಿರಬಹುದು, ಆದರೆ ಪರಸ್ಪರರನ್ನು ಗೌರವಿಸುವುದನ್ನು ಕಲಿಯಬೇಕಾಗಿದೆ

ಬ್ಯಾಡಗಿ: ಬೌದ್ಧಿಕ ಬೆಳವಣಿಗೆಯ ಬಾಗಿಲು ತೆರೆಯುವ ಸಾಧನವೇ ಶಿಕ್ಷಣ, ವಿದ್ಯಾರ್ಥಿಯ ಕಲಿಕೆ ಸಾಮರ್ಥ್ಯ ವೃದ್ಧಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಶಾಲೆಗಳನ್ನು ಆರಂಭಿಸುವ ಮೂಲಕ ಇಂತಹದ್ದೊಂದು ಮಹಾಸಂಗಮಕ್ಕೆ ನಾಂದಿ ಹಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಹೇಳಿದರು.

ಇಲ್ಲಿನ ನೂತನ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು, ಕಲಿಕೆ ಎಂದರೆ ಕೇವಲ ಪುಸ್ತಕ ಓದುವುದು ಅಥವಾ ಗಣಿತದ ಸಮಸ್ಯೆ ಪರಿಹರಿಸುವುದು ಎಂಬ ನಿರ್ಧಾರಕ್ಕೆ ಬರುವುದು ತಪ್ಪು, ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆಗಳು, ಹೊಸ ಕನಸುಗಳು ಮತ್ತು ಹೊಸ ಅವಕಾಶಗಳಿಗೆ ಶಿಕ್ಷಣ ಕಾರಣವಾಗಲಿದ್ದು, ಹೀಗಾಗಿ ಶಾಲೆಗಳಲ್ಲಿ ಪಡೆದಂತಹ ಶೈಕ್ಷಣಿಕ ಜ್ಞಾನವು ವಿದ್ಯಾರ್ಥಿಯ ಜೀವನ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದರು.

ನಿವೃತ್ತ ಉಪನ್ಯಾಸಕ ಡಾ. ಪ್ರೇಮಾನಂದ ಲಕ್ಕಣ್ಣನವರ ಮಾತನಾಡಿ, ಧಾರ್ಮಿಕ ಅಂಧತ್ವ ಹಾಗೂ ಶೋಕಿ ಬದುಕಿನ ಹಿಂದೆ ಬೀಳುತ್ತಿರುವ ಯುವಕರು ಹಣ ಸಂಪಾದನೆ ಉದ್ದೇಶದಿಂದ ಕತ್ತಲೆ ಜಗತ್ತಿನ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದ್ದಾರೆ, ವಿಭಿನ್ನ ಅಭಿಪ್ರಾಯಗಳಿರಬಹುದು, ಆದರೆ ಪರಸ್ಪರರನ್ನು ಗೌರವಿಸುವುದನ್ನು ಕಲಿಯಬೇಕಾಗಿದೆ, ಇಂತಹ ನೂರಾರು ಸಮಸ್ಯೆಗಳಿಗೆ ಶೈಕ್ಷಣಿಕ ಅಭಿವೃದ್ಧಿಯ ಭರವಸೆಯೊಂದೇ ಅಂತಿಮ ಪರಿಹಾರವಾಗಲಿದೆ ಎಂಬ ವಿಷಯವನ್ನು ನಾವೆಲ್ಲರೂ ಬಲವಾಗಿ ಪ್ರತಿಪಾದಿಸೋಣ ಎಂದರು.

ಜಾನಾರ್ಜನೆಯೇ ಮಹಾಪ್ರಸಾದ:

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ನೂತನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕುಮಾರಗೌಡ ಪಾಟೀಲ ಮಾತನಾಡಿ, ಕಲಿಕೆಯಲ್ಲಿರುವ ಅಗಾಧ ಶಕ್ತಿಯನ್ನು ಬಲವಾಗಿ ನಂಬುವಂತಹ ಪ್ರತಿಯೊಬ್ಬರಿಗೂ ಶಾಲೆಗಳು ದೇವಾಲಯಗಳಿಗೆ ಪರಿವರ್ತನೆಗೊಳ್ಳಲಿವೆ, ಅಲ್ಲಿರುವ ಶಿಕ್ಷಕರೇ ದೇವರೆಂದು ಭಾವಿಸಲಾಗುತ್ತದೆ, ಶಾಲೆಯಲ್ಲಿ ಸಿಗುವಂತಹ ಜ್ಞಾನಾರ್ಜನೆಯೇ ಮಹಾಪ್ರಸಾದ ವೆಂದು ಪರಿಭಾವಿಸಿಕೊಳ್ಳುತ್ತಾರೆ ಎಂದರು.

ನೂತನ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಮೌಳಿ ಎಲಿ ಮಾತನಾಡಿ, ಇಲ್ಲಿರುವ ಶಿಕ್ಷಕ ಸಿಬ್ಬಂದಿಗಳು ನಮಗೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳು ನಮಗೆ ಸ್ಫೂರ್ತಿಯ ಸೆಲೆಯಾಗಿ ನಿಂತಿದ್ದಾರೆ, ಹೀಗಾಗಿ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಲು ನಾವು ಸಿದ್ಧವಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಫ್‌.ಹುಳ್ಯಾಳ, ನೂತನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸುರೇಶ ಮೇಲಗಿರಿ, ಮಲ್ಲಿಕಾರ್ಜುನ ಮೂಡ್ವಿ, ಸಹ ಕಾರ್ಯದರ್ಶಿ ನಾಗರಾಜ ಕುಳೇನೂರ, ಆಡಳಿತಾ ಧಿಕಾರಿ ಬಸವರಾಜ ತುಮರಿಕೊಪ್ಪದ, ಮುಖ್ಯಶಿಕ್ಷಕರಾದ ಲಕ್ಷ್ಮೀಬಾಯಿ ಸತ್ತಿಗೇರಿ, ಸಿದ್ದಮ್ಮ ಮೋಗಿಮಠ ಉಪಸ್ಥಿತರಿದ್ದರು. ಶಿಕ್ಷಕಿ ಸುಮಾ ಪೂಜಾರ ಸ್ವಾಗತಿಸಿದರು, ಭಾರತಿ ನಿರೂಪಿಸಿದರು, ಭಾಗ್ಯ ಕಲಕಟ್ಟಿ ವಂದಿಸಿದರು.