ಜೀತಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರ: ನ್ಯಾಯಾಧೀಶೆ ದೀಪಾ

| Published : Feb 19 2024, 01:31 AM IST

ಜೀತಪದ್ಧತಿ ನಿರ್ಮೂಲನೆಗೆ ಶಿಕ್ಷಣವೇ ಅಸ್ತ್ರ: ನ್ಯಾಯಾಧೀಶೆ ದೀಪಾ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಜೀತಪದ್ಧತಿಯನ್ನು ಸಂಪೂರ್ಣವಾಗಿ ನಾಶಮಾಡಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಇಂತಹ ಅನಿಷ್ಠ ಪದ್ಧತಿಗಳನ್ನು ಬೇರು ಸಹಿತ ಕಿತ್ತುಹಾಕಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಜೀತಪದ್ಧತಿಯನ್ನು ಸಂಪೂರ್ಣವಾಗಿ ನಾಶಮಾಡಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಇಂತಹ ಅನಿಷ್ಠ ಪದ್ಧತಿಗಳನ್ನು ಬೇರು ಸಹಿತ ಕಿತ್ತುಹಾಕಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.

ನಗರದ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದ ಪುಟಗಳನ್ನು ಪುನರಾವರ್ತಿಸಿ ನೋಡಿದಾಗ ರೈತವಾರಿ ಪದ್ಧತಿ, ಜಮೀನ್ದಾರಿ ಪದ್ಧತಿಗಳು ಅಸ್ತಿತ್ವದಲ್ಲಿದ್ದ ರೀತಿಯಲ್ಲಿ ಜೀತಪದ್ಧತಿಯೂ ಕೂಡ ಅಸ್ತಿತದಲ್ಲಿದ್ದು ಇದರಲ್ಲಿ ವಂಶ ಪಾರಂಪರ್ಯವಾಗಿ ಜೀತದಾಳು ಪದ್ಧತಿ ರೂಢಿಯಲ್ಲಿದ್ದು ಇದರಿಂದ ನಿರಂತರವಾಗಿ ಶೋಷಣೆ ಎಂಬುದು ಜರುಗುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಜೀತ ಪದ್ಧತಿ ಕಡಿಮೆಯಾಗಿದ್ದರೂ ಕೆಲ ಭಾಗಗಳಲ್ಲಿ ಇದು ನಡೆಯುತ್ತಿದ್ದು, ವಿದ್ಯಾರ್ಥಿಗಳಾದ ನೀವು ಇಂತಹ ಶೋಚನೀಯ ವ್ಯವಸ್ಥೆ ಎಲ್ಲಿಯಾದರೂ ಕಂಡು ಬಂದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಯುವಶಕ್ತಿ ದೇಶದ ಆಸ್ತಿಯಾಗಿದ್ದು ತಾವೆಲ್ಲರೂ ಗುರು-ಹಿರಿಯರ ಮಾರ್ಗದರ್ಶದಲ್ಲಿ ನಡೆದು ಗುರಿಯೊಂದಿಗೆ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿ ಭವಿಷ್ಯದ ಬದುಕನ್ನು ಹಸನಾಗಿಸಿಕೊಂಡು ಭವ್ಯ ಭಾರತದ ಸತ್ಪ್ರೆಜೆಗಳಾಗಬೇಕು ಎಂದರು.

ಪ್ಯಾನೆಲ್ ವಕೀಲ ಬಿ.ಎನ್. ಅಜಯ್ ಮಾತನಾಡಿ, ಹಿಂದಿನಿಂದಲೂ ಇಂತಹ ಅನಿಷ್ಠ ಪದ್ಧತಿಗಳು ರೂಢಿಯಲ್ಲಿದ್ದು ಪ್ರಸ್ತುತ ದಿನಗಳಲ್ಲಿ ಇವುಗಳನ್ನು ಇಲ್ಲವಾಗಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ಭವಿಷ್ಯದ ದಿನಗಳಲ್ಲಿ ತಮ್ಮಲ್ಲಿಯೇ ಇರುವ ವಿವಿಧ ಪ್ರತಿಭೆಗಳನ್ನು ಅನಾವರಣ ಮಾಡಿ ರಾಷ್ಟ್ರದ ಸದೃಢತೆಗೆ ಸಹಕಾರಿಯಾಗಬೇಕು. ಶಿಸ್ತು, ಸಂಯಮದಿಂದ ನಡೆದುಕೊಂಡು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಉತ್ತಮವಾಗಿ ಕಾಪಾಡಬೇಕು ಎಂದ ಅವರು ಮಾನವನ ದಿನನಿತ್ಯ ಜೀವನದಲ್ಲಿ ಬಳಕೆಯಾಗುವ ಕಾನೂನುಗಳ ಬಗ್ಗೆ ತಿಳಿಸಿದರು.

ಆರಕ್ಷಕ ಸಿಬ್ಬಂದಿ ಚೇತನ್ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಂಡು ಆದರ್ಶ ವಿದ್ಯಾರ್ಥಿಗಳಾಗಬೇಕು. ಮಹಾನ್ ನಾಯಕ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು. ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ ನಿರ್ದಿಷ್ಟ ಪಥದಲ್ಲಿ ಸಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ನಿಲಯ ಪಾಲಕ ಮಂಜುನಾಥ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.