ಸಾರಾಂಶ
ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದು ಉನ್ನತ ಸ್ಥಾನಮಾನ ಪಡೆದು ಜೀವನ ರೂಪಿಸಿಕೊಳ್ಳಬೇಕು. ಸಮಿತಿ ಸದಸ್ಯರು ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಟ್ರಸ್ಟ್ ನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿ ಮತ್ತು ದಾನಿಗಳಿಂದ ದೇಣಿಗೆ ಪಡೆದ ಹಣ ಸೇರಿಸಿ ಈ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹಲಗೂರು
ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹಾಗೂ ಸತ್ಪ್ರಜೆಯಾಗಿ ಬದುಕಲು ವಿದ್ಯೆ ಅಮೂಲ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಹೇಳಿದರು.ಹಲಗೂರು ವಿದ್ಯಾ ಸಂಸ್ಥೆಯಲ್ಲಿ ಹೋಬಳಿ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿತರಕ್ಷಣಾ ಸಮಿತಿಯವರು ಸುಮಾರು 29 ವರ್ಷಗಳಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ನಿಘಂಟು ಮತ್ತು ಜಾಮಿಟ್ರಿ ಬಾಕ್ಸ್ ಹಾಗೂ ಇನ್ನೂ ಅಗತ್ಯ ಇರುವ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆದು ಉನ್ನತ ಸ್ಥಾನಮಾನ ಪಡೆದು ಜೀವನ ರೂಪಿಸಿಕೊಳ್ಳಬೇಕು. ಸಮಿತಿ ಸದಸ್ಯರು ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಟ್ರಸ್ಟ್ ನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿ ಮತ್ತು ದಾನಿಗಳಿಂದ ದೇಣಿಗೆ ಪಡೆದ ಹಣ ಸೇರಿಸಿ ಈ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ ಎಂದು ಹೇಳಿದರು.ಮಕ್ಕಳು ಜವಾಬ್ದಾರಿಯುತವಾಗಿ ಅವುಗಳನ್ನು ಉಪಯೋಗಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ನಿಮ್ಮ ಕೈಲಾದ ನೆರವನ್ನು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ನ ಪದಾಧಿಕಾರಿಗಳಾದ ಅಶೋಕ್,ದೇವರಾಜ್, ಎಚ್.ಸಿ.ನಾಗರಾಜು, ಪ್ರಶಾಂತ್, ಮೋಹನ್ ದಾಸ, ಮುರಳಿ, ಶಾಲೆ ಮುಖ್ಯೋಪಾಧ್ಯಾಯ ಎಚ್.ಶಿವರಾಮ ಮತ್ತು ಇತರರು ಇದ್ದರು.