ಸಾರಾಂಶ
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಸಪ್ತಾಹಕ್ಕೆ ಚಾಲನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರತಿಯೊಬ್ಬ ವ್ಯಕ್ತಿ ಘನತೆ ಹಾಗೂ ವೈಯಕ್ತಿಕ ಹಕ್ಕಾಗಿರುವ ಶಿಕ್ಷಣ ವ್ಯಕ್ತಿಯ ಬೆಳವಣಿಗೆಗೆ ತುಂಬಾ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಜಿಲ್ಲಾ ಲೋಕ ಶಿಕ್ಷಣ ಇಲಾಖೆಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತಾ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆ ಪಾತ್ರ ಬಹಳ ಮುಖ್ಯವಾದದ್ದು, ದೇಶದ ನಗರ ಪ್ರದೇಶದಲ್ಲಿ ಹೆಚ್ಚು ಸಾಕ್ಷರತರಾಗಿದ್ದರೆ ದೇಶ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಣದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಕ್ಷರತೆ ಮಹತ್ವದ ಬಗ್ಗೆ ಅನಕ್ಷರಸ್ಥರಲ್ಲಿ ಅರಿವು ಮೂಡಿಸಿ ಅವರನ್ನು ಸಾಕ್ಷರರನ್ನಾಗಿ ಮಾಡಬೇಕು ಎಂದು ಹೇಳಿದರು.ಯುನೆಸ್ಕೋ ಮೊದಲ ಬಾರಿಗೆ 1965ರ ನವೆಂಬರ್ 7 ರಂದು ವಿಶ್ವ ಸಾಕ್ಷರತಾ ದಿನ ಆಚರಿಸಬೇಕೆಂದು ನಿರ್ಧರಿಸಿತು. ಪ್ರಪಂಚದಿಂದ ಅನಕ್ಷರತೆ ಕುರುಹುಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಎಷ್ಟು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು 1966 ರ ಅಕ್ಟೋಬರ್ 26 ರಂದು ವಿಶ್ವ ಸಂಸ್ಥೆ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ತನ್ನ 14ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಗುವುದೆಂದು ಘೋಷಿಸಿತು. 1966 ರ ಸೆ. 6 ರಂದು ವಿಶ್ವ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಿತು ಎಂದರು.ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇರುವ ಗ್ರಾಮೀಣ ಹಾಗೂ ನಗರ ಭಾಗದ 15 ರಿಂದ 60 ವರ್ಷದೊಳಗಿನ ವಯೋಮಾನದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಮತ್ತು ಎಲ್ಲಾ ವರ್ಗದ ಅನಕ್ಷರಸ್ಥರನ್ನು ಸಮೀಕ್ಷೆ ಮೂಲಕ ಗುರುತಿಸಿ ಅವರಿಗೆ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸುವುದು ಪ್ರಮುಖ ಉದ್ದೇಶವಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆ ಹಾಗೂ ಪುರುಷರಿಗೆ ಸಾಮಾನ್ಯ ಓದು, ಬರಹ, ಲೆಕ್ಕಚಾರ ಕಲಿಸುವ ಮೂಲಕ ಅಕ್ಷರಸ್ಥರಾಗಿ ಮಾಡಬೇಕು ಎಂದು ಹೇಳಿದರು.ಸರ್ಕಾರ ಕೇಂದ್ರ ಪುರಸ್ಕೃತ ಯೋಜನೆಗಳಾದ ಸಾಕ್ಷರ ಸನ್ಮಾನ, ಕಲಿಕೆ ಗಳಿಕೆ, ಕನ್ನಡ ನಾಡು ಸಾಕ್ಷರ ನಾಡು, ಮುಂದುವರಿಕೆ ಶಿಕ್ಷಣ, ಸಮಾನ ಶಿಕ್ಷಣ, ಸಾಕ್ಷರತಾ ಭಾರತ್ ಹೀಗೆ ಹಲವಾರು ಯೋಜನೆಗಳ ಮೂಲಕ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸಿದೆ. ಈ ನವ ಸಾಕ್ಷರರಿಗೆ ಸಾಕ್ಷರತಾ ಶಿಬಿರ ಏರ್ಪಡಿಸಿ ಅವರ ಜೀವನ ಗುಣಮಟ್ಟ ಸುಧಾರಿಸಲು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವುದೇ ಧ್ಯೇಯವಾಗಿದೆ ಎಂದ ಅವರು, ಪ್ರತಿಯೊಬ್ಬರು ಅಕ್ಷರ ಕಲಿತು ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಿ ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಪ್ರತಿಯೊಬ್ಬ ಅಕ್ಷರಸ್ಥ ಯುವ ಜನತೆ ತಮ್ಮ ಸುತ್ತಮುತ್ತ ಪ್ರದೇಶದ ಅನಕ್ಷರಸ್ಥರಿಗೆ ಪ್ರಾಥಮಿಕ ಅಕ್ಷರ ಜ್ಞಾನ ಹಾಗೂ ಲೆಕ್ಕಚಾರಗಳ ಅರಿವು ಮೂಡಿಸಿ ಅಕ್ಷರಸ್ಥರ ನ್ನಾಗಿ ಮಾಡಬೇಕು. ನಾಮಫಲಕ ಓದುವುದು ತಮ್ಮ ಹೆಸರನ್ನು ಸಹಿ ಹಾಕುವುದು ಇತರರೊಂದಿಗೆ ವ್ಯವಹಾರಿಕ ವಾಗಿ ತೊಡಗಿಕೊಳ್ಳಲು ಜ್ಞಾನ ಹೊಂದುವಂತೆ ಮಾಡಬೇಕು ಅಕ್ಷರಸ್ಥರಾಗುವುದರಿಂದ ಇತರರಿಂದ ಮೋಸ ಹೋಗುವು ದನ್ನು ತಡೆಗಟ್ಟಬಹುದು. ತಾವು ಕಲಿತು ಇತರರಿಗೆ ಕಲಿಸಿ ಅಕ್ಷರಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸ ಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಚೋಪ್‌ದಾರ್, ಜಿಲ್ಲಾ ವಯಸ್ಕರ ಶಿಕ್ಷಣ ಸಹಾಯಕ ಕೆ.ಎಂ. ಲೋಕೇಶ್, ಜಿಲ್ಲಾ ಶಿಕ್ಷಣಾಧಿಕಾರಿ ನಾಗರಾಜ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು. 9 ಕೆಸಿಕೆಎಂ 3
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭಿತ್ತಿಪತ್ರ ಬಿಡುಗಡೆ ಮಾಡಿದರು. ಜಿಪಂ ಸಿಇಒ ಕೀರ್ತನಾ, ಚೋಪ್‌ದಾರ್, ಲೋಕೇಶ್, ನಾಗರಾಜ್ ಇದ್ದರು.