ಸಾರಾಂಶ
- ರಾಜ್ಯದಲ್ಲೇ ಮೊದಲ ಬಾರಿಗೆ ಮಧ್ಯ ಕರ್ನಾಟಕದಲ್ಲಿ 3 ದಿನಗಳ ಮೇಳ ಆಯೋಜನೆ
- ನಟ ರಮೇಶ ಅರವಿಂದ, ವಾಗ್ಮಿ ಡಾ.ಗುರುರಾಜ್ ಕರ್ಜಗಿ, ಹುಲಿಕಲ್ ನಟರಾಜ ಭಾಗಿ - - - ಕನ್ನಡಪ್ರಭ ವಾರ್ತೆ ದಾವಣಗೆರೆಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಸುವರ್ಣ ದೇಶ ಪಬ್ಲಿಕೇಷನ್ ಹಾಗೂ ಬೆಂಗಳೂರಿನ ಎಲ್.ಆರ್. ಈವೆಂಟ್ ಮ್ಯಾನೇಜ್‌ಮೆಂಟ್‌ನಿಂದ ಫೆ.7ರಿಂದ ಮೂರು ದಿನಗಳ ಕಾಲ ಶಿಕ್ಷಣ-ಸಾಹಿತ್ಯ ಮೇಳವನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಪುಸ್ತಕ, ಸಾಹಿತ್ಯ ಮೂರಕ್ಕೂ ಇರುವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿ, ಜನರಲ್ಲಿ ಸಾಹಿತ್ಯ, ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವ ಸದುದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಶಿಕ್ಷಣ-ಸಾಹಿತ್ಯ ಮೇಳ ದಾವಣಗೆರೆ ಮಹಾನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದರು.ಪಾಲಕರಿಗೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತೀವ ಕಾಳಜಿ ಇರುತ್ತದೆ. ಅವರಿಗೆ ಎಂತಹ ಶಾಲೆ ಬೇಕು, ಮಕ್ಕಳಿಗೆ ಯಾವ ಕೋರ್ಸ್ ಸೂಕ್ತವೆಂಬ ಗೊಂದಲ ಸಹಜ. ಪಾಲಕರ ಇಂಥ ಗೊಂದಲಗಳ ಪರಿಹರಿಸುವಲ್ಲಿ ಮೇಳ ಸಹಕಾರಿಯಾಗಲಿದೆ. ವಿಶ್ವ ಕನ್ನಡ ಸಮ್ಮೇಳನ ನಡೆಸುವುದರ ಮುನ್ಸೂಚನೆಯಾಗಿ ಈ ಮೇಳ ಇಲ್ಲಿಗೆ ಹುಡುಕಿಕೊಂಡು ಬಂದಂತಿದೆ ಎಂದರು.
ಹಿರಿಯ ಗಾಯಕ, ಚಿತ್ರನಟ ಗುರುರಾಜ ಹೊಸಕೋಟೆ ಮಾತನಾಡಿ, ಸಾಹಿತ್ಯವು ಸಮಾಜವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸುವ ಸಾರಥಿ. ಈ ಮೇಳವೂ ಸಮಾಜ ಉತ್ತಮ ಮಾರ್ಗದಲ್ಲಿ ಸಾಗಲು ಅವಶ್ಯವಿರುವ ಎಲ್ಲ ಮಾಹಿತಿ ನೀಡುವ ವಿಶಿಷ್ಟ ಮೇಳವಾಗಿದೆ. ಮೊಬೈಲ್ ಬಳಕೆ ದುಷ್ಪರಿಣಾಮ, ಪರಿಸರ ಜಾಗೃತಿ, ಪ್ಲಾಸ್ಟಿಕ್ ಬಳಕೆಯಿಂದಾಗುವ ವಿಪತ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಸಾಹಿತ್ಯ ಸಮ್ಮೇಳನದ ಹೊಸ ಆಯಾಮ ಪರಿಚಯಿಸುವ ಉದ್ದೇಶ ನಮ್ಮದು. ಸಾಹಿತ್ಯ ಸಮ್ಮೇಳನ ರೀತಿಯಲ್ಲೇ ಮೇಳ ನಡೆಯಲಿದೆ. ನವ ಲೇಖಕರ ಮೇಳವಿದ್ದು, ಹಿರಿಯ ಸಾಹಿತಿಗಳನ್ನು ಪರಿಚಯಿಸುವ, ವೇದಿಕೆ ಹಂಚಿಕೊಳ್ಳುವ ಕಾರ್ಯಕ್ರಮ ಇರಲಿವೆ. ಕವಿಗೋಷ್ಠಿ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರ ನಡೆಯಲಿದೆ ಎಂದರು.
ಕವನ ವಾಚನ ಮಾಡಿದ ಕವಿಗಳ ಕವನಗಳ ಸಂಕಲನ ಮಾಡಿ, ಪುಸ್ತಕ ರೂಪದಲ್ಲೂ ಹೊರತರಲಾಗುವುದು. 2001ರಿಂದ ಹೆಚ್ಚು ಪ್ರಚಲಿತ ಲೇಖಕರು, ಅವರ ಕೃತಿಗಳನ್ನು ಪರಿಚಯಿಸುವ ಜೊತೆಗೆ ಹೊಸಬರಿಗೆ ಸಾಕಷ್ಟು ಅವಕಾಶ ನೀಡಲಾಗುವುದು. ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ನಿರಂತರ ಕಾರ್ಯಕ್ರಮ ನಡೆಯಲಿದೆ. ಶೀಘ್ರವೇ ಸರ್ವ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಮೇಳದ ಉಸ್ತುವಾರಿ, ಪ್ರಕಾಶಕ ಆನಂದಗೌಡ ಮಾತನಾಡಿ, ಪ್ರತಿದಿನ ಒಂದೊಂದು ವಿಶಿಷ್ಟ ಮೇಳ ನಡೆಯಲಿದೆ. ಫೆ.7ಕ್ಕೆ ಸಾಹಿತ್ಯ ಮೇಳ, 8ಕ್ಕೆ ಶಿಕ್ಷಣ ಮೇಳ, 9ಕ್ಕೆ ಉದ್ಯೋಗ ಮೇಳ ನಡೆಯಲಿದೆ. ನಟ ರಮೇಶ ಅರವಿಂದ, ವಾಗ್ಮಿ ಡಾ.ಗುರುರಾಜ್ ಕರ್ಜಗಿ, ಹುಲಿಕಲ್ ನಟರಾಜ ಮತ್ತಿತರ ಪ್ರಮುಖರು ಭಾಗವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.
ಪರಿಷತ್ತಿನ ರೇಖಾ ಓಂಕಾರಪ್ಪ, ಲೋಕೇಶ, ಸಿದ್ಧಲಿಂಗಮೂರ್ತಿ ಇದ್ದರು.- - - -20ಕೆಡಿವಿಜಿ63:
ದಾವಣಗೆರೆಯಲ್ಲಿ ಸೋಮವಾರ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.