ಶೈಕ್ಷಣಿಕ ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ ಆರಂಭ

| Published : May 29 2024, 12:46 AM IST

ಸಾರಾಂಶ

ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ 2 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ಸಿಎಸ್‌ಆರ್ ಅನುದಾನದಡಿ 2500 ಸಾವಿರ ಕೋಟಿ ಹಣವನ್ನು ಕೊಡಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಶೈಕ್ಷಣಿಕ ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುತ್ತೇವೆ. ಮುಂದಿನ 3 ವರ್ಷಗಳಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವ ಗುರಿ ಹೊಂದಿರುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಸ್ಆರ್ ಅನುದಾನದಡಿ ಪಬ್ಲಿಕ್ ಶಾಲೆ ಆರಂಭಿಸಲಿದ್ದೇವೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿವೆ. 2 ಪಂಚಾಯಿತಿಗೆ ಒಂದರಂತೆ 1 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭಕ್ಕೆ 2 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ. ಸಿಎಸ್‌ಆರ್ ಅನುದಾನದಡಿ 2500 ಸಾವಿರ ಕೋಟಿ ಹಣವನ್ನು ಕೊಡಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಎಲ್ಲಾ ಸೌಕರ್ಯದೊಂದಿಗೆ ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ಶಾಲೆ ಮೇಲೆ ವಿಶ್ವಾಸ

ಜೂ.29 ರಂದು ಶಾಲೆ ಆರಂಭವಾಗಲಿದೆ. ಶಿಕ್ಷಕರು ಮಕ್ಕಳ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ. ಮಕ್ಕಳೇ ವಿಶ್ವಾಸವಿಟ್ಟು ಸರ್ಕಾರಿ ಶಾಲೆಗಳಿಗೆ ಬನ್ನಿ, ನಿಮ್ಮ ಭವಿಷ್ಯ ರೂಪಿಸುತ್ತೇವೆ ಎಂದು ಮನವಿ ಮಾಡುತ್ತೇನೆ. ಶೇ.95 ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಸಮವಸ್ತ್ರದಲ್ಲಿ ಗುಣಮಟ್ಟದಲ್ಲಿ ಕೊರತೆ ಇದ್ದರೆ ದೂರು ಕೊಡಬಹುದು. ಷೂ ಖರೀದಿಗೆ ಎಸ್‌ ಡಿಎಂಸಿ ಅಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟಿರುವುದರಿಂದ 15 ದಿನಗಳ ಒಳಗೆ ಷೂ ಖರೀದಿಸಿ ನೀಡುತ್ತಾರೆ. ಶೈಕ್ಷಣಿಕ ಸಾಲಿನಲ್ಲಿ ಸೈಕಲ್ ವಿತರಿಸುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೆ ವಾರದಲ್ಲಿ 2 ಬಾರಿ ಮೊಟ್ಟೆ, ರಾಗಿ ಮಾಲ್ಟ್ ನೀಡಿ ಪೌಷ್ಟಿಕತೆ ಹೆಚ್ಚಿಸಲಾಗುತ್ತಿದೆ. ಪ್ರಣಾಳಿಕೆಯಲ್ಲಿ ನುಡಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದು, ಎನ್ಇಪಿ ಬದಲು ಎಸ್‌ಇಪಿ ಜಾರಿಗೆ ತಂದಿದ್ದೇವೆ. ಈ ಬದಲಾವಣೆಯಿಂದ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ. ಹಾಗೆಯೇ, ಎನ್‌ಇಪಿಯಲ್ಲಿರುವ ಒಳ್ಳೆಯ ಅಂಶಗಳನ್ನು ಅಳವಡಿಕೆ ಮಾಡುತ್ತೇವೆ ಎಂದರು.