ಗುರುಕುಲದಲ್ಲಿ ಅಧ್ಯಾತ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳ ಶಿಕ್ಷಣ

| Published : Feb 12 2024, 01:36 AM IST / Updated: Feb 12 2024, 02:43 PM IST

Koppal Swami
ಗುರುಕುಲದಲ್ಲಿ ಅಧ್ಯಾತ್ಮ, ಸಂಸ್ಕಾರ, ಮಾನವೀಯ ಮೌಲ್ಯಗಳ ಶಿಕ್ಷಣ
Share this Article
  • FB
  • TW
  • Linkdin
  • Email

ಸಾರಾಂಶ

ಮರಾಠ ಜಗದ್ಗುರು ಶ್ರೀಮಂಜುನಾಥ ಮಹಾರಾಜರ ಸಾನ್ನಿಧ್ಯದಲ್ಲಿ ಹಳಿಯಾಳದಲ್ಲಿ ಆರಂಭಗೊಳ್ಳಲಿರುವ ಗುರುಕುಲವು ಅಂತ್ಯೋದಯ, ಗ್ರಾಮೋದಯ ಹಾಗೂ ಸರ್ವೋದಯ ಪರಿಕಲ್ಪನೆ ಸಾಕರಗೊಳಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಹೇಳಿದರು.

ಹಳಿಯಾಳ: ಮರಾಠ ಜಗದ್ಗುರು ಶ್ರೀಮಂಜುನಾಥ ಮಹಾರಾಜರ ಸಾನ್ನಿಧ್ಯದಲ್ಲಿ ಹಳಿಯಾಳದಲ್ಲಿ ಆರಂಭಗೊಳ್ಳಲಿರುವ ಗುರುಕುಲವು ಅಂತ್ಯೋದಯ, ಗ್ರಾಮೋದಯ ಹಾಗೂ ಸರ್ವೋದಯ ಪರಿಕಲ್ಪನೆ ಸಾಕರಗೊಳಿಸಲಿದೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಹೇಳಿದರು.

ಭಾನುವಾರ ಹಳಿಯಾಳ ತಾಲೂಕಿನ ಹವಗಿ ಗ್ರಾಮದಲ್ಲಿ ಬೆಂಗಳೂರಿನ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಮರಾಠ ಜಗದ್ಗುರು ಶ್ರೀಮಂಜುನಾಥ ಭಾರತಿ ಸ್ವಾಮಿಜಿಯವರು ನೇತೃತ್ವದಲ್ಲಿ ಆರಂಭಗೊಳ್ಳಲಿರುವ ಶ್ರೀಹರಿ ಛತ್ರಪತಿ ಶಿವಾಜಿ ಮಹಾರಾಜ ಗುರುಕುಲದ ಶಿಲಾನ್ಯಾಸ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಸಮಾಜ ಮತ್ತು ದೇಶವನ್ನು ಬಲಿಷ್ಠಗೊಳಿಸುವಂತಹ ಉದ್ದಾತ್ ಅಂಶಗಳನ್ನು ಬೋಧಿಸುವ ಶಿಕ್ಷಣದ ಅವಶ್ಯತೆ ಈಗ ಸಮಾಜಕ್ಕಿದೆ ಎಂದರು.

ಹಳಿಯಾಳದಲ್ಲಿ ಆರಂಭಗೊಳ್ಳಲಿರುವ ಗುರುಕುಲದಲ್ಲಿ ಶಿಕ್ಷಣದ ಜತೆಯಲ್ಲಿ ಸಂಸ್ಕಾರ ಮಾನವೀಯ ಮೌಲ್ಯಗಳು ಮತ್ತು ಕೌಶಲ್ಯದಾರಿತ ಬೋಧನೆ ಮಾಡಲಾಗುತ್ತಿರುವುದು ಇದೊಂದು ಅಭಿವೃದ್ಧಿಪರ ಬೆಳವಣಿಗೆಯಾಗಿದೆ ಎಂದರು.

ಗುರುಕುಲದ ಮೂಲಕ ಪ್ರಧಾನಿ ಕಲ್ಪನೆ ಸಾಕಾರ: ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಮಾತನಾಡಿ, ದೇಶದ ಶಿಕ್ಷಣ ಕ್ಷೇತ್ರವು ಬಹುವರ್ಷಗಳಿಂದ ಎದುರಿಸುತ್ತಿದ್ದ ಕೊರತೆ ನಿಗಿಸಲು ಪ್ರಧಾನ ಮಂತ್ರಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. 

ಪ್ರಧಾನಿಯವರ ಶೈಕ್ಷಣಿಕ ಕಲ್ಪನೆ ಗುರುಕುಲದ ಮೂಲಕ ಕಾರ್ಯರೂಪಕ್ಕೆ ತರಲು ಶ್ರೀಮಂಜುನಾಥ ಮಹಾರಾಜರು ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾರವಾರ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಮರಾಠ ಸಮುದಾಯವು ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅತಿಯಾಗಿ ಹಿಂದುಳಿದಿದೆ.

ಅದಕ್ಕಾಗಿ ಮರಾಠ ಸಮುದಾಯ ಮುಖ್ಯವಾಹಿನಿಗೆ ಬರಬೇಕಾದರೇ ಮೀಸಲಾತಿ ಸೌಲಭ್ಯ ಸಿಗಬೇಕು, ಈ ದಿಸೆಯಲ್ಲಿ 3ಬಿ ಯಿಂದ 2ಎಪ್ರವರ್ಗಕ್ಕೆ ಸೇರಿಸಬೇಕೆಂಬ ಹೋರಾಟ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಗೋವಾ ಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಪ್ರಧಾನ ಮಂತ್ರಿಯವರ ಗಮನಕ್ಕೆ ತರಬೇಕೆಂದರು.

ಶ್ರೀರಾಮನ ಆದರ್ಶ ಬೋಧನೆ: ಶ್ರೀವಿನಯ ಗುರೂಜಿ ಆಶೀರ್ವಚನ ನೀಡಿ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಸಿಗದಂತಹ ಮಾನವೀಯ ಮೌಲ್ಯಗಳು,ಅಧ್ಯಾತ್ಮ ಮತ್ತು ಸಂಸ್ಕಾರಗಳನ್ನು ಹುಟ್ಟು ಹಾಕುವ ಸಾಮಥ್ರ್ಯವು ಗುರುಕುಲಕ್ಕೆ ಇದೆ, ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಆದಾಯದ ಸ್ವಲ್ಪ ಭಾಗ ಗುರುಕುಲದ ನಿರ್ಮಾಣ ಮತ್ತು ನಿರ್ವಹಣೆಗೆ ಮೀಸಲಾಗಿಡಿರಿ ಎಂದರು.

ಚಿತ್ರದುರ್ಗ ಕಪಿಲಾನಂದ ಆಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ದೇಶವು ರಾಮರಾಜ್ಯವಾಗಬೇಕಾದರೇ ಶ್ರೀರಾಮನಲ್ಲಿನ ಆದರ್ಶಗಳು ನಮ್ಮಲ್ಲಿ ಬರಬೇಕು, ಈ ಆದರ್ಶಗಳನ್ನು ಹುಟ್ಟು ಹಾಕುವ ಕಾರ್ಯ ಕೇವಲ ಗುರುಕುಲದಿಂದ ಮಾತ್ರ ಸಾಧ್ಯ ಎಂದರು.

ಅಧ್ಯಾತ್ಮ ಸಂಸ್ಕಾರದ ಶಿಕ್ಷಣ: ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಮರಾಠ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಬಹುವರ್ಷಗಳ ಹಿಂದೆಯೇ ಹಳಿಯಾಳದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಮೂರು ಏಕರೆ ಜಮೀನು ಮಂಜೂರು ಮಾಡಿ ಗುರುಕುಲದ ಪರಿಕಲ್ಪನೆ ಹುಟ್ಟು ಹಾಕಿದ್ದರು. 

ಎಲ್ಲವರೂ ನಮ್ಮವರೇ ಎಂಬ ವಿಚಾರ ನನ್ನದಾಗಿದೆ, ಈ ವಿಚಾರಧಾರೆಯಡಿಯಲ್ಲಿ ಹಳಿಯಾಳದಲ್ಲಿ ಪ್ರಾರಂಭಗೊಳ್ಳಲಿರುವ ಗುರುಕುಲವು ಸರ್ವ ಸಮಾಜದವರಿಗಾಗಿ ಇರಲಿದ್ದು, ಜಾತಿ, ಮತ, ಪಂಥವೆಂದು ಪರಿಗಣಿಸದೇ ಸರ್ವರಿಗೂ ಪ್ರವೇಶ ನೀಡಲಾಗುವುದು ಎಂದರು.